ಆರೆಸ್ಸೆಸ್ ಸಿದ್ಧಾಂತ ಹೇರಲು ಕೇಂದ್ರ ಸರಕಾರದ ಹವಣಿಕೆ: ಸಿದ್ದನಗೌಡ ಪಾಟೀಲ್
ಡಾ.ಎಚ್.ಎಸ್.ದೊರೆಸ್ವಾಮಿಯವರ 'ಪ್ರಚಲಿತ ರಾಜಕೀಯ ಎತ್ತ ಸಾಗಿದೆ?' ಕೃತಿ ಲೋಕಾರ್ಪಣೆ

ಬೆಂಗಳೂರು, ಮೇ 12: ಕೇಂದ್ರದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ರಾಜಕಾರಣ ನಡೆಸದೇ ಆರೆಸ್ಸೆಸ್ ನ ಸಿದ್ಧಾಂತಗಳನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಸದಸ್ಯ ಡಾ. ಸಿದ್ದನಗೌಡ ಪಾಟೀಲ್ ಹೇಳಿದ್ದಾರೆ.
ನಗರದ ಕಸಾಪದ ಕುವೆಂಪು ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಆಯೋಜಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅವರ "ಪ್ರಚಲಿತ ರಾಜಕೀಯ ಎತ್ತ ಸಾಗಿದೆ" ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಇಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಮಹಾತ್ಮ ಗಾಂಧೀಜಿಯವರನ್ನು ವ್ಯವಸ್ಥಿತವಾಗಿ ಕೊಲೆಗೈದ ಸಂಘಟನೆಯನ್ನು ರಾಷ್ಟ್ರ ಭಕ್ತ ಸಂಘಟನೆಯಂತೆ ಪ್ರತಿಬಿಂಬಿಸುವ ಕೆಲಸ ಮಾಡುತ್ತಿದೆ. ಜನರಿಗೆ ಉತ್ತಮ ಆಡಳಿತ ನೀಡುವ ಬದಲು ಆರೆಸ್ಸೆಸ್‌ನ ಸಿದ್ಧಾಂತಗಳನ್ನು ಜಾರಿಗೆ ತರಲು ಶ್ರಮಿಸುತ್ತಿದೆ ಎಂದು ಖಂಡಿಸಿದರು.
ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಸುಮ್ಮನೆ ಕಣ್ಣಾಡಿಸಿ ಪಕ್ಕಕ್ಕಿಡುವ ಪುಸ್ತಕ ಇದಲ್ಲ. ಎರಡು ಪುಟಗಳನ್ನು ಮೀರದಂತೆ ಇಲ್ಲಿರುವ ಲೇಖನಗಳು ಸಂಕ್ಷಿಪ್ತವಾಗಿ, ನೇರ ದಾಟಿಯಲ್ಲಿ ಗುಂಡು ಹೊಡೆದಷ್ಟೇ ನೇರವಾಗಿವೆ. ರಾಜ್ಯದಲ್ಲಿನ ಭ್ರಷ್ಟತೆ, ಅನ್ಯಾಯಗಳನ್ನು ದಾಖಲೆ ಸಮೇತ ಸಿದ್ಧಪಡಿಸಿದ್ದಾರೆ ಎಂದು ಬಣ್ಣಿಸಿದರು.
ಯಾವುದೇ ದೊಡ್ಡಮಟ್ಟದಲ್ಲಿರುವ ರಾಜಕಾರಣಿ, ಅಧಿಕಾರಿಯ ಭ್ರಷ್ಟತೆಯನ್ನು ಮುಲಾಜಿಲ್ಲದೆ, ಅಳುಕು ಇಲ್ಲದೆ ದಿಟ್ಟವಾಗಿ ಹೇಳುವ ಗುಣ ಬರವಣಿಗೆಯಲ್ಲಿ ಗೋಚರಿಸುತ್ತದೆ. ಈ ಪುಸ್ತಕದಲ್ಲಿ ಗಾಂಧಿಯ ಮಾದರಿ, ಗಾಂಧಿಯ ಮಾರ್ಗದರ್ಶನ ಗುರುತಿಸಬಹುದು ಎಂದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, "ಪುಸ್ತಕದಲ್ಲಿ ನಾನು ಯಾರನ್ನು ನಿಂದಿಸಿಲ್ಲ. ತಪ್ಪು ದಾರಿ ಹಿಡಿದ, ಅನ್ಯಾಯ ಮಾಡಿದವರನ್ನು ಖಂಡಿಸಿದ್ದೇನೆ. ಎಲ್ಲ ಪಕ್ಷಗಳು ಆತ್ಮ ನಿರೀಕ್ಷೆ ಮಾಡಿಕೊಂಡು ಉತ್ತಮ ರಾಜಕಾರಣ ನಡೆಸಲಿ. ಇದನ್ನು ನಾನು ಅಪೇಕ್ಷೆ ಪಡುತ್ತೇನೆ. ನಾನು ಬರೆದಿರುವ ಪುಸ್ತಕದ ಕುರಿತು ಸಾಮಾನ್ಯ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು. ನಾನು ಹೇಳಿರುವುದು ತಪ್ಪಿದ್ದರೆ ಆಕ್ಷೇಪ ವ್ಯಕ್ತ ಪಡಿಸಲು ಅವಕಾಶವಿದೆ" ಎಂದರು.
ಕಾರ್ಯಕ್ರಮದಲ್ಲಿ ಚಿಂತಕ ಡಾ.ಜಿ.ರಾಮಕೃಷ್ಣ, ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಸೇರಿದಂತೆ ಇತರರು ಇದ್ದರು.







