ಬೆಳ್ತಂಗಡಿ: ಪ. ಜಾತಿ-ಪ. ಪಂಗಡಗಳ ಕುಂದು ಕೊರತೆ ಸಭೆ

ಬೆಳ್ತಂಗಡಿ, ಮೇ 12: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯು ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕೊಯ್ಯೂರು ಗ್ರಾಪಂ ನಲ್ಲಿ ಶೇ. 25 ನಿಧಿಯಲ್ಲಿ ಪ. ಜಾತಿ, ಪ. ಪಂಗಡದವರಿಗೆ ಮೀಸಲಿರಿಸಿದ ಅನುದಾನದಲ್ಲಿ ದಲಿತ ಸಮುದಾಯದ ಒಂದೇ ಒಂದು ಮನೆ ಇಲ್ಲದ ಪ್ರದೇಶದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳುವಂತೆ ಮುಖಂಡರು ಹಿಂದಿನ ಸಭೆಯಲ್ಲಿ ಒತ್ತಾಯಿಸಿದ್ದರು. ಆದರೆ ಇದರ ಬಗ್ಗೆ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದ್ದರಿಂದ ಚಂದು ಎಲ್. ಇದರ ಬಗ್ಗೆ ಪ್ರಸ್ತಾವಿಸಿದರು. ಈ ಬಗ್ಗೆ ಸಮಜಾಯಿಸಿ ನೀಡಿದ ಕಾರ್ಯನಿರ್ವಹಣಾಧಿಕಾರಿ ಅಲ್ಲಿನ ಪಿಡಿಒ ನೀಡಿದ ವರದಿ ಹಿನ್ನೆಯಲ್ಲಿ ತಂಗುದಾಣ ನಿರ್ಮಿಸಲಾಗಿದೆ ಎಂದಾಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಚಂದು ಎಲ್. ಎಚ್ಚರಿಸಿದರು.
ನಂತರ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ದಿವ್ಯ ಜ್ಯೋತಿ, ಜಿಪಂ ಸದಸ್ಯ ಶೇಖರ ಕುಕ್ಕೇಡಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ವೇಣೂರು ಎಸ್‌ಐ ಲೋಲಾಕ್ಷ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.





