ವಿವಿಪಿಎಟಿ ಇದ್ದರೂ ವಂಚನೆ ಸಾಧ್ಯ
ಮಾನ್ಯರೆ,
ಪತ್ರಿಕೆಯ ‘ಮರಳಿ ಮತಪತ್ರದೆಡೆಗೆ’ ಎಂಬ ಸಂಪಾದಕೀಯ ತುಂಬಾ ಅರ್ಥ ಪೂರ್ಣವಾಗಿತ್ತು. ಆದರೆ ವಿವಿಪಿಎಟಿ ಇರುವುದರಿಂದ ಮತಯಂತ್ರ ತಿರುಚುವಿಕೆ ಸಾಧ್ಯವಿಲ್ಲ ಎಂದು ನಂಬುವುದು ಸರಿಯಲ್ಲ. ಕಾರಣ ವಿವಿಪಿಎಟಿ ಚೀಟಿ ಇದ್ದರೂ ಮತಯಂತ್ರ ತಿರುಚಿ ಮೋಸ ಮಾಡುವುದು ಸಾಧ್ಯ ಎಂದು ಸಾಫ್ಟ್‌ವೇರ್ ಇಂಜಿನಿಯರ್‌ರ ಅಭಿಪ್ರಾಯ. ಮತದಾರ ನಿರ್ದಿಷ್ಟ ಪಾರ್ಟಿಯ ಗುಂಡಿ ಒತ್ತಿದಾಗ ವಿವಿಪಿಎಟಿ ಯಂತ್ರದ ಸ್ಕ್ರೀನ್ ಅದೇ ಪಕ್ಷದ ಚಿಹ್ನೆ ತೋರಿಸಬಹುದು, ಆದರೆ ಒಳಗಿಂದೊಳಗೆ ಚೀಟಿಯ ಮುದ್ರಣ ಬೇರೆ ಪಾರ್ಟಿಯದು ಆಗುವಂತೆ ಸೆಟ್ಟಿಂಗ್ ಮಾಡಬಹುದು ಎಂದು ಪರಿಣಿತರ ಅಭಿಪ್ರಾಯ. ಒಂದು ವೇಳೆ ಆ ಚೀಟಿ ಮತದಾರನ ಕೈಗೆ ಬಂದು ಅವನು ಅದನ್ನು ಪರಿಶೀಲಿಸಿ ನಂತರ ತನ್ನ ಕೈಯಿಂದಲೇ ಮತಪೆಟ್ಟಿಗೆಯಲ್ಲಿ ಹಾಕುವಂತಿದ್ದರೆ ವಂಚನೆ ಸಾಧ್ಯವಿಲ್ಲ. ಆದರೆ ಈಗ ಆ ಚೀಟಿ ವಿವಿಪಿಎಟಿ ಯಂತ್ರದ ಒಳಗೆಯೇ ಉಳಿಯುತ್ತದೆ ಹಾಗೂ ಅದು ತನ್ನಿಂದ ತಾನೇ ಮತಪೆಟ್ಟಿಗೆಯೊಳಗೆ ಹೋಗಿ ಬೀಳುತ್ತದೆ. ಮತದಾರ ಆ ಚೀಟಿ ನೋಡಲು ಆಗುವುದೇ ಇಲ್ಲ. ಕೇವಲ ಸ್ಕ್ರೀನ್ ಮೇಲೆ ಒಂದು ಪಕ್ಷದ ಚಿಹ್ನೆ ಕಾಣುವಂತೆ ಹಾಗೂ ಒಳಗಿಂದೊಳಗೆ ಚೀಟಿಯಲ್ಲಿ ಇನ್ನೊಂದು ಪಕ್ಷದ ಚಿಹ್ನೆ ಮುದ್ರಣ ಆಗುವಂತೆ ಮಾಡುವುದು ಸಾಧ್ಯ ಎನ್ನುತ್ತಾರೆ ಪರಿಣಿತರು. ಹಾಗಾಗಿ
ವಿವಿಪಿಎಟಿ ಇದ್ದರೂ ವಂಚನೆಯ ಸೆಟ್ಟಿಂಗ್ ಸಾಧ್ಯ.





