ಬಿರಿಯಾನಿ,ಕಬಾಬ್‌ಗಳಾಗುತ್ತಿವೆ ನಾಯಿಗಳು

ಗುರುಗ್ರಾಮ,ಮೇ 13: ಇಲ್ಲಿಯ ಡಿಎಲ್‌ಎಫ್ ಎರಡನೇ ಹಂತದ ಮನೆಯೊಂದ ರಿಂದ ನಾಪತ್ತೆಯಾಗಿರುವ ಬ್ರೌನಿ ಹೆಸರಿನ ನಾಯಿಯ ಒಡತಿ ಅನುಪಮಾ ಶ್ರೀವಾಸ್ತವ ಅವರು ‘ಜಸ್ಟೀಸ್ ಫಾರ್ ಬ್ರೌನಿ’ ಹೆಸರಿನಲ್ಲಿ ಆನ್‌ಲೈನ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಗುರುಗ್ರಾಮದಿಂದ ನಾಪತ್ತೆಯಾಗಿರುವ ಇತರ ನಾಯಿಗಳಿಗಾಗಿಯೂ ಈ ಅಭಿಯಾನ ನಡೆಯುತ್ತಿದ್ದು, ಈಗಾಗಲೇ 458 ಜನರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ಇನ್ನಷ್ಟು ಜನರ ಬೆಂಬಲ ದೊರೆಯುವ ನಿರೀಕ್ಷೆಯಿದೆ.
ನಾಪತ್ತೆಯಾಗಿರುವ ನಾಯಿಗಳಿಗಾಗಿ ಉತ್ತರದಾಯಿತ್ವವನ್ನು ಬಯಸಿರುವ ಅನಪಮಾ, ನಾಯಿಗಳನ್ನು ಕೊಂದು ಬಿರಿಯಾನಿ,ಕಬಾಬ್ ಇತ್ಯಾದಿ ಖಾದ್ಯಗಳನ್ನು ತಯಾರಿಸಿ, ರೆಸ್ಟೋರಂಟ್‌ಗಳಲ್ಲಿ ಜನರಿಗೆ ಉಣಬಡಿಸಲು ಅವುಗಳನ್ನು ಅಪಹರಿಸುವ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬ್ರೌನಿ ಎ.1ರಿಂದ ಕಾಣೆಯಾಗಿದ್ದು, ಸಿಕಂದರಪುರದ ಜನರ ಗುಂಪೊಂದು ಅದನ್ನು ಅಪಹರಿಸಿ ಕೊಂದು ತಿಂದಿದೆ ಎಂದು ಶಂಕಿಸಲಾಗಿದೆ. ಶಂಕಿತ ಆರೋಪಿ ಫಿಲಿಪ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರಾದರೂ, ಸಾಕ್ಷಾಧಾರದ ಕೊರತೆಯಿಂದ ಆತನನ್ನು ವಿಧ್ಯುಕ್ತವಾಗಿ ಬಂಧಿಸಲಾಗಿಲ್ಲ.
ಗುರುಗ್ರಾಮದ ಇನ್ನೋರ್ವ ನಿವಾಸಿ ಸೋನಿಯಾ ಎನ್ನುವವರ ಮುದ್ದಿನ ನಾಯಿ ಮೋಟು ಕೂಡ ಎ.11ರಿಂದ ಕಾಣೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಇವೆರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬ್ರೌನಿ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಫಿಲಿಫ್ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತಾದರೂ ಬ್ರೌನಿ ಅಪಹರಣದಲ್ಲಿ ಆತನ ಪಾತ್ರ ಸಾಬೀತಾಗಿಲ್ಲ. ಆತನನ್ನು ಬಳಿಕ ಬಿಡುಗಡೆ ಮಾಡಲಾಗಿದೆಯಾದರೂ ಎಲ್ಲ ಶಂಕಿತರ ಮೇಲೆ ನಿಗಾಯಿರಿಸಿದ್ದೇವೆ. ಕೆಲವು ಸುಳಿವುಗಳು ದೊರಕಿದ್ದು, ಬ್ರೌನಿ ಪತ್ತೆಯಾಗುವ ಆಶಯ ಹೊಂದಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸುದೀಪಕುಮಾರ್ ತಿಳಿಸಿದ್ದಾರೆ.
ಆದರೆ ಪೊಲೀಸರ ಹೇಳಿಕೆ ನಾಯಿಗಳ ಮಾಲಿಕರಿಗೆ ಸಮಾಧಾನವನ್ನುಂಟು ಮಾಡಿಲ್ಲ. ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಮತ್ತು ವೀಡಿಯೊ ಅಪರಾಧವನ್ನು ಸ್ಪಷ್ಟವಾಗಿ ಸಾಬೀತು ಮಾಡಿದೆ. ಬ್ರೌನಿ ಒಂದೇ ಅಲ್ಲ, ಗುರುಗ್ರಾಮದ ಹಲವಾರು ನಾಯಿಗಳು ಈ ಕರಾಳ ದಂಧೆಗೆ ಬಲಿಯಾಗುತ್ತಿವೆ ಮತ್ತು ಇವು ಬಿರಿಯಾನಿ,ಕಬಾಬ್ ಇತ್ಯಾದಿ ಖಾದ್ಯಗಳ ರೂಪದಲ್ಲಿ ಜನರ ಊಟದ ಪ್ಲೇಟ್‌ಗಳಲ್ಲಿ ಪ್ರತ್ಯಕ್ಷವಾಗುತ್ತಿವೆ. ನಾವು ತಿನ್ನುವ ಹೆಚ್ಚಿನ ಮಾಂಸಾಹಾರಿ ಖಾದ್ಯಗಳು ನಾಯಿಮಾಂಸದಿಂದಲೇ ತಯಾರಾಗುತ್ತಿವೆ. ನಮ್ಮ ಅಭಿಯಾನ ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧವಲ್ಲ, ಅದು ಕಾನೂನು ಭಂಜಕರ ವಿರುದ್ಧವಾಗಿದೆ. ಮಾತು ಬಾರದ ಸಾಕುಪ್ರಾಣಿಗಳು ಮತ್ತು ಬೀದಿಪ್ರಾಣಿಗಳ ರಕ್ಷಣೆ ನಮ್ಮ ಹಕ್ಕು ಆಗಿದೆ. ಬ್ರೌನಿಗೆ ನ್ಯಾಯ ದೊರೆಯಬೇಕು. ನಾವು ಗುರುಗ್ರಾಮದ ಪೊಲೀಸರಲ್ಲಿ ನಂಬಿಕೆ ಹೊಂದಿದ್ದೇವೆ ಎಂದು ಆನ್‌ಲೈನ್ ಅಹವಾಲು ಹೇಳಿದೆ.