ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ: ನಾಲ್ವರ ಬಂಧನ

ಭಟ್ಕಳ:, ಮೇ 13: ಬಂದರ್ ರಸ್ತೆಯಲ್ಲಿ ಆಟೊ ರಿಕ್ಷಾ ಚಾಲಕನಿಗೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ 5ರಂದು ಚಾಲಕ ಅಶ್ರಫ್ ತನ್ನ ಆಟೊದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಸಂದರ್ಭ ಮಾರಾಣಾಂತಿಕವಾಗಿ ಹಲ್ಲೆಗೈದು ರಿಕ್ಷಾವನ್ನು ಜಖಂಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶಿವಮೊಗ್ಗ ಜಿಲ್ಲೆಯ ಅನಾವಟ್ಟಿ ಎಂಬಲ್ಲಿ ಬಂಧಿಸಿ ಭಟ್ಕಳಕ್ಕೆ ಕರೆದುಕೊಂಡು ಬಂದಿದ್ದಾರೆ.
ಹಲ್ಲೆಗೊಳಗಾದ ಆಶ್ರಫ್ ಉಡುಪಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಶ್ರಫ್ ರ ಪತ್ನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಟ್ಕಳ ತಾಲೂಕು ಆಟೊ ರಿಕ್ಷಾ ಚಾಲಕ ಮಾಲಕ ಸಂಘವು ಹಲ್ಲೆಗೆ ಸಂಬಂಧಿಸಿದಂತೆ ನಗರ ಠಾಣಾಧಿಕಾರಿಗಳನ್ನು ಭೇಟಿಯಾಗಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತಗೊಂಡ ಪೊಲೀಸರು ಶಿವಮೊಗ್ಗ ಜಿಲ್ಲೆಗೆ ಪರಾರಿಯಾಗಿದ್ದ ಬದ್ರಿಯಾ ಕಾಲನಿಯ ಅಬ್ದುಲ್ ರಹ್ಮಾನ್(25), ಝೀಯಾ ಶೇಖ್(24), ಅಬ್ದುಲ್ ಮಜೀದ್(25) ಹಾಗೂ ಉಮರ್ ಸ್ಟ್ರೀಟ್ ನಿವಾಸಿ ಬಿಲಾಲ್ ಆಹ್ಮದ್(25) ಎಂಬುವವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆಟೊ ರಿಕ್ಷಾ ಚಾಲಕ - ಮಾಲಕ ಸಂಘದಿಂದ ಅಭಿನಂದನೆ: ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಆಟೊ ರಿಕ್ಷಾ ಚಾಲಕ ಮಾಲಕ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ. ನಾಯ್ಕ ಹಾಗೂ ಭಟ್ಕಳ ತಾಲೂಕು ಅಧ್ಯಕ್ಷ ವೆಂಕಟೇಶ್ ನಾಯ್ಕ ಅಭಿನಂಧಿಸಿದ್ದಾರೆ.
ಈ ಕುರಿತು ಶನಿವಾರ ಇಲ್ಲಿನ ಸತ್ಕಾರ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಟಿಯನ್ನು ನಡೆಸಿದ ಅವರು ಪೊಲೀಸರು ಆಟೋ ರಿಕ್ಷಾ ಚಾಲಕರ ಬೆನ್ನಿಗಿದ್ದಾರೆ ಯಾವತ್ತು ನಮಗೆ ಅನ್ಯಾಯ ಆಗುವುದಿಲ್ಲ ಎನ್ನುವುದು ಹಲ್ಲೆ ಪ್ರಕರಣದ ಘಟನೆಯಿಂದ ಸಾಬೀತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಆಟೊ ರಿಕ್ಷಾ ಚಾಲಕ ಮಾಲಕರ ಸಂಘ ಬಲಿಷ್ಠವಾಗಿದ್ದು ಚಾಲಕರ ಪ್ರತಿಯೊಂದು ಸಮಸ್ಯೆಗಳಿಗೆ ಕೂಡಲೆ ಸ್ಪಂಧಿಸುತ್ತದೆ. ಚಾಲಕರು ಯಾವುತ್ತೂ ಕಾನೂನನ್ನು ಉಲ್ಲಂಘಿಸುವ ಕೆಲಸ ಮಾಡದೆ ಸಾರ್ವಜನಿಕರಿಗೆ ಸಹಕಾರಿಗಳಾಗಬೇಕು ಎಂದು ಜಿಲ್ಲಾಧ್ಯಕ್ಷ ಆರ್.ಜಿ.ನಾಯ್ಕ ಕರೆ ನೀಡಿದರು.
ಭಟ್ಕಳ ತಾಲೂಕು ಅಧ್ಯಕ್ಷ ವೆಂಕಟೇಶ್ ನಾಯ್ಕ ಮಾತನಾಡಿ, ಚಾಲಕರ ಮೇಲೆ ಯಾವುದೇ ರೀತಿಯ ಅನ್ಯಾಯವನ್ನು ಸಂಘ ಸಹಿಸದು ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ನಾಯ್ಕ, ಅಬ್ದುಲ್ ಮುಬೀನ್, ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.







