ಊಟ ಮಾಡದ ಕಾರಣಕ್ಕೆ ಅಜ್ಜಿಯನ್ನು ಕೊಂದ ಮೊಮ್ಮಗ!

ಬೆಂಗಳೂರು, ಮೇ 13: ಅಜ್ಜಿಯೊಬ್ಬರ ಮೃತದೇಹ ಕಬೋರ್ಡ್‌ನಲ್ಲಿ ಸಿಕ್ಕಿದ್ದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಊಟ ಮಾಡದ ಕ್ಷುಲ್ಲಕ ಕಾರಣಕ್ಕೆ ಮೊಮ್ಮಗನೇ ಅಜ್ಜಿಯನ್ನು ಕೊಂದಿದ್ದಾನೆ ಎಂದು ಕೆಂಗೇರಿ ಠಾಣಾ ಪೊಲೀಸರು ಹೇಳಿದ್ದಾರೆ.
ಏಳು ತಿಂಗಳ ಕಾಲ ಶವವಿದ್ದ ರೂಂನಲ್ಲೇ ಮಲಗುತ್ತಿದ್ದ ಆರೋಪಿ, ಅನಂತರ ವಾಸನೆ ಬಂದ ಕಾರಣಕ್ಕೆ ಮನೆ ಖಾಲಿ ಮಾಡಿದ್ದ ಎಂದು ತಿಳಿದು ಬಂದಿದೆ. ಆಗಸ್ಟ್‌ನಲ್ಲಿ ಅಜ್ಜಿಯನ್ನ ಕೊಲೆ ಮಾಡಿ ಕಬೋರ್ಡ್‌ನಲ್ಲಿ ಇಟ್ಟಿದ್ದ. ಫೆಬ್ರವರಿಯಲ್ಲಿ ವಾಸನೆ ಬಂದಿದ್ದರಿಂದ ದಿಕ್ಕು ತೋಚದಂತಾಗಿ ಮನೆ ಖಾಲಿ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸಂಜಯ್ ಮತ್ತವನ ತಾಯಿ ಶಶಿಕಲಾ ಬಂಧನಕ್ಕೆ ಕೆಂಗೇರಿ ಠಾಣಾ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಕೆಂಗೇರಿಯಲ್ಲಿ ನವೀನ್ ಎಂಬವರ ಬಾಡಿಗೆ ಮನೆಯಲ್ಲಿ ಸಂಜಯ್ ವಾಸವಿದ್ದ. ಮನೆಯಲ್ಲಿ ತಾಯಿ, ಮಗ ಹಾಗೂ ಅಜ್ಜಿ ಮೂರು ಮಂದಿ ಜನ ವಾಸವಿದ್ದರು. ಫೆಬ್ರವರಿಯಲ್ಲಿ ಆರೋಪಿ ಸಂಜಯ್, ಮನೆ ಮಾಲಕ ನವೀನ್‌ನಿಂದಲೆ 50 ಸಾವಿರ ರೂ. ಸಾಲ ಪಡೆದು ಊರಿಗೆ ಹೋಗುತ್ತಿದ್ದೇನೆಂದು ಹೇಳಿ ತನ್ನ ತಾಯಿ ಶಶಿಕಲಾ ಜೊತೆ ತೆರಳಿದ್ದ. ಮತ್ತೆ ಮನೆಯ ಕಡೆ ಸಂಜಯ್ ಕುಟುಂಬ ಹಿಂತಿರುಗಿರಲಿಲ್ಲ. ಮನೆಯ ಅಗ್ರಿಮೆಂಟ್ ಮುಗಿದ ಬಳಿಕ ಮಾಲಕ ನವೀನ್ ಮನೆಯೊಳಗೆ ಹೋಗಿದ್ದು ಮನೆಯ ಕಬೋರ್ಡ್‌ನಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ನೋಡಿ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಅಜ್ಜಿಯದೇ ಎಂಬುದು ದೃಢವಾಗಿತ್ತು. ಶಿವಮೊಗ್ಗದಲ್ಲಿ ಇರುವ ಅಜ್ಜಿಯ ಸಂಬಂಧಿಕರಿಗೆ ಪೊಲೀಸರು ಈ ಬಗ್ಗೆ ವಿಷಯ ಮುಟ್ಟಿಸಿದ್ದರಾದರೂ ಸಂಸ್ಕಾರಕ್ಕೂ ಅಜ್ಜಿಯ ಶವ ಬೇಡ ಎಂದು ಸಂಬಂಧಿಕರು ಹೇಳಿದ್ದರು. ಈ ಸಂಬಂಧ ಕೆಂಗೇರಿ ಠಾಣಾ ಪೊಲೀಸರು ಕೊಲೆ ಮೊಕದ್ದಮೆ ದಾಖಲು ಮಾಡಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.







