ಎಸೆಸೆಲ್ಸಿಯಲ್ಲಿ ಅವಳಿ ಸಹೋದರರ ವಿಶಿಷ್ಟ ಸಾಧನೆ

ಮಂಗಳೂರು, ಮೇ 13: ಬಜ್ಪೆ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳಾದ, ಅವಳಿ ಸಹೋದರರಾದ ನೋಯೆಲ್ ಡಿಕೋಸ್ತಾ ಮತ್ತು ಜೋಯೆಲ್ ಡಿಕೋಸ್ತಾ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ
ನೋಯೆಲ್ 623 ಅಂಕಗಳೊಂದಿಗೆ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನಿಗಳಲ್ಲಿ ಓರ್ವರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಜೋಯೆಲ್ 605 ಅಂಕಗಳನ್ನು ಪಡೆದಿದ್ದಾರೆ. ‘‘ನಾವಿಬ್ಬರೂ ಯಾವುದೇ ರೀತಿ ಟ್ಯೂಶನ್ ಪಡೆದುಕೊಂಡಿಲ್ಲ. ಆದರೆ ತರಗತಿಯಲ್ಲಿ ಶಿಕ್ಷಕರು ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಆಲಿಸಿ, ಮನನ ಮಾಡುತ್ತಿದ್ದೆವು. ಯಾವುದೇ ರೀತಿಯ ಸಂದೇಹಗಳಿದ್ದರೂ ಅದನ್ನು ತರಗತಿಯಲ್ಲೇ ಶಿಕ್ಷಕರನ್ನು ಕೇಳಿ ಬಗೆಹರಿಸಿಕೊಳ್ಳುತ್ತಿದ್ದೆವು. ದಿನಕ್ಕೆ ಗರಿಷ್ಠ ನಾಲ್ಕರಿಂದ ಆರು ಗಂಟೆಗಳ ಕಾಲ ಓದುತ್ತಿದ್ದೆವು’’ ಎಂದು ನೋಯೆಲ್ ಹಾಗೂ ಜೋಯೆಲ್ ಹೇಳಿದ್ದಾರೆ.
ಮುಂದೆ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲಿಚ್ಚಿದ್ದಾರಾದರೂ ನೋಯೆಲ್‌ಗೆ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಬೇಕೆಂಬ ಆಸೆಯಿದೆ. ಜೋಯೆಲ್‌ಗೆ ಮೂಲ ವಿಜ್ಞಾನದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂಬ ಇರಾದೆಯಿದೆ.
ತಾನು ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯುತ್ತಿದ್ದೆ, ಆದರೆ ವಿಜ್ಞಾನ ಹಾಗೂ ಗಣಿತ ಪರೀಕ್ಷೆಯಲ್ಲಿ ಬರೆಯಲು ಸಮಯ ಸಾಕಾಗದ ಕಾರಣ ಅಂಕಗಳು ಕಡಿಮೆಯಾದವು ಎಂದು ಜೋಯೆಲ್ ಹೇಳಿದ್ದಾರೆ.
ಅನಿತಾ ಡಿಕೋಸ್ತಾ ಮತ್ತು ಪ್ರಕಾಶ್ ಡಿಕೋಸ್ತಾ ದಂಪತಿ ಅವಳಿ ಪುತ್ರರಾಗಿರುವ ನೋಯೆಲ್ ಆಗೂ ಜೋಯೆಲ್‌ಗೆ ಕ್ರಿಕೆಟ್ ಆಟ ಹಾಗೂ ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ಓದುವುದೆಂದರೆ ಅಚ್ಚುಮೆಚ್ಚು.