6 ಭಾರತೀಯರಿಂದ ಎವರೆಸ್ಟ್ ಆರೋಹಣ : ವಿಶ್ವದ ಅತ್ಯುನ್ನತ ಶಿಖರ ಏರಿದ ಮೊದಲ ಋತುವಿನ ಮೊದಲ ತಂಡ

ಕಠ್ಮಂಡು (ನೇಪಾಳ), ಮೇ 13: ಆರು ಭಾರತೀಯ ಪರ್ವತಾರೋಹಿಗಳು ಇಂದು ವಿಶ್ವದ ಅತ್ಯುನ್ನತ ಶಿಖರ ವೌಂಟ್ ಎವರೆಸ್ಟ್‌ನ ತುದಿಯನ್ನು ತಲುಪಿದ್ದಾರೆ. ಆ ಮೂಲಕ, ಈ ಋತುವಿನಲ್ಲಿ ಯಶಸ್ವಿಯಾಗಿ ಪರ್ವತ ಶೃಂಗ ತಲುಪಿದ ಮೊದಲ ಗುಂಪಿನ ಪರ್ವತಾರೋಹಿಗಳಾಗಿದ್ದಾರೆ.
ಆರು ಭಾರತೀಯ ಪರ್ವತಾರೋಹಿಗಳು ಮತ್ತು 10 ನೇಪಾಳಿ ಶೆರ್ಪಾಗಳು ಇಂದು ಬೆಳಗ್ಗೆ 8,850 ಮೀಟರ್ ಎತ್ತರದ ಶಿಖರದ ತುದಿಯಲ್ಲಿ ನಿಂತರು. ಮೊದಲ ಆರೋಹಿ ಸ್ಥಳೀಯ ಸಮಯ ಬೆಳಗ್ಗೆ 8:20ಕ್ಕೆ ಶಿಖರದ ಮೇಲೆ ಕಾಲಿಟ್ಟರು ಹಾಗೂ ಉಳಿದವರು ಅವರನ್ನು ಹಿಂಬಾಲಿಸಿದರು ಎಂದು ಈ ಪರ್ವತಾರೋಹಣವನ್ನು ಆಯೋಜಿಸಿದ ‘ಟ್ರಾನ್ಸೆಂಡೆಂಟಲ್ ಅಡ್ವೆಂಚರ್ಸ್’ನ ಅಧಿಕಾರಿಗಳು ತಿಳಿಸಿದರು.
ಸುರೇಶ್ ಬಾಬು, ದುರ್ಗಾ ರಾವ್ ಕುಂಜ, ಭರತ್ ತಮಿನೇನಿ, ಕೃಷ್ಣ ರಾವ್ ವೂಯಕ, ಸತ್ಯ ರಾವ್ ಕರೆ ಮತ್ತು ನಾಗರಾಜು ಸುಂದರಾನ 10 ಶೆರ್ಪಾಗಳೊಂದಿಗೆ ಉತ್ತರ ಟಿಬೆಟ್ ಕಡೆಯಿಂದ ಶಿಖರವನ್ನು ಏರಿದರು.

ಮ್ಯಾರಥಾನ್ ಒಟಗಾರನಾಗಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಸುಂದರಾನ, ಮೊದಲಿಗೆ ಎವರೆಸ್ಟ್ ತಲುಪಿದರು. ಅವರ ಹೆತ್ತವರು ದಿನಗೂಲಿ ಕಾರ್ಮಿಕರು. ತಂಡದ ಕೊನೆಯ ಸದಸ್ಯ ಬೆಳಗ್ಗೆ 9:20ಕ್ಕೆ ತುದಿ ತಲುಪಿದರು.
ಹೆಚ್ಚಿನ ಪರ್ವತಾರೋಹಿಗಳು ಆಂಧ್ರಪ್ರದೇಶದ ಕಡಿಮೆ ಆದಾಯದ ಕುಟುಂಬಗಳಿಂದ ಬಂದವರು.
ಗುರುವಾರ ಒಂಭತ್ತು ಶೆರ್ಪಾಗಳು ಎವರೆಸ್ಟ್ ತುದಿಗೆ ಹತ್ತುವ ದಾರಿಯನ್ನು ತೆರೆದರು ಹಾಗೂ ಆ ಮೂಲಕ ಈ ಋತುವಿನಲ್ಲಿ ಟಿಬೆಟ್ ಕಡೆಯಿಂದ ಮೌಂಟ್ ಎವರೆಸ್ಟ್ ಹತ್ತಿದ ಪ್ರಥಮ ತಂಡದ ಸದಸ್ಯರಾದರು ಎಂದು ಪರ್ವತಾರೋಹಣ ಸಂಘಟಕರು ಹೇಳಿದ್ದಾರೆ.







