ಬನ್ಸ್ವಾರಾ ಕೋಮು ಸಂಘರ್ಷ ಪ್ರಕರಣ:ಕರ್ಫ್ಯೂ ಮುಂದುವರಿಕೆ,36 ಜನರ ಬಂಧನ

ಬನ್ಸ್ವಾರಾ,ಮೇ 13: ಗುರುವಾರ ರಾತ್ರಿ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಕೋತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಶನಿವಾರವೂ ಮುಂದುವರಿದಿದ್ದು, ಘಟನೆಗೆ ಸಂಬಂಧಿಸಿದಂತೆ ಈವರೆಗೆ 36 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದಲ್ಲಿ ಉದ್ವಿಗ್ನತೆಯ ಬಳಿಕ 36 ಜನರನ್ನು ಬಂಧಿಸಿದ್ದೇವೆ. ಗುರುವಾರ ರಾತ್ರಿಯಿಂದೀಚಿಗೆ ಪ್ರದೇಶದಲ್ಲಿ ಹಲವಾರು ಕಡೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ ಎಂದು ಬನ್ಸ್ವಾರಾ ಎಸ್‌ಪಿ ಕಾಲೂರಾಮ್ ರಾವತ್ ತಿಳಿಸಿದರು.
ಕಾಳಿಕಾ ಮಠ ಪ್ರದೇಶದಲ್ಲಿನ ಧಾರ್ಮಿಕ ಸ್ಥಳಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯಗಳ ನಡುವೆ ವಿವಾದವಿದೆ. ಗುರುವಾರ ರಾತ್ರಿ ಶಬೇ ಬರಾತ್ ಮೆರವಣಿಗೆಯು ಈ ಪ್ರದೇಶದಿಂದ ಸಾಗುತ್ತಿದ್ದಾಗ ಎರಡೂ ಸಮುದಾಯಗಳ ನಡುವೆ ಹಿಂಚಾಚಾರ ನಡೆದು ಕರ್ಫ್ಯೂ ಹೇರಲಾಗಿತ್ತು.
ಶುಕ್ರವಾರ ರಾತ್ರಿ ಎರಡೂ ಸಮುದಾಯಗಳ ಹಿರಿಯರ ಶಾಂತಿಸಭೆ ನಡೆಸಲಾಗಿದೆ. ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾವತ್ ತಿಳಿಸಿದರು.
Next Story





