ನಾನು "ಜಿಲೇಬಿ" ವಿರೋಧಿಯಲ್ಲ: ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ, ಮೇ 13: ನಾನು ಅಹಿಂದ ವರ್ಗಗಳ ಪರವಾಗಿದ್ದೇನೆ. ಆದರೆ ಗೌಡ, ಲಿಂಗಾಯಿತ, ಬ್ರಾಹ್ಮಣ ಸೇರಿದಂತೆ ಮೇಲ್ವರ್ಗದ ವಿರೋಧಿ ಎನ್ನುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಸರಕಾರಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸೌಲಭ್ಯಗಳ ಹಂಚಿಕೆ ಹಾಗೂ "ಜನರಿಗೆ ಮನನ-ಜನರಿಗೆ ನಮನ" ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ವಿಧಾನಸಭೆಯಲ್ಲಿ ಪ್ರತಿಪಕ್ಷ ನಾ0ುಕ ಜಗದೀಶ್ ಶೆಟ್ಟರ್ "ಸಿದ್ದರಾಮಯ್ಯ ಜಿಲೇಬಿ ವಿರೋಧಿ" ಎಂದು ಆರೋಪ ಮಾಡಿದ್ದರು. ಜಿಲೇಬಿ ಎಂದರೆ ಬಹುಶಃ ಸಿಹಿ ತಿಂಡಿ ಇರಬೇಕು ಎಂದುಕೊಂಡಿದ್ದೆ. ನನಗೆ ಸಕ್ಕರೆ ಕಾಯಿಲೆ ಇದೆ, ಸಿಹಿ ತಿಂಡಿ ಇಷ್ಟವಾಗಲ್ಲ. ಹಾಗಾಗಿ ಜಿಲೇಬಿ ವಿರೋಧಿ ಎಂದಿರಬಹುದು ಎಂದುಕೊಂಡಿದ್ದೆ. ಆದರೆ, ಜಿಲೇಬಿ ಎಂದರೆ ಮೇಲ್ವರ್ಗದ ವಿರೋಧಿ ಎಂಬ ಅರ್ಥ ಇದೆ ಎನ್ನುವುದು ನಿಧಾನಕ್ಕೆ ತಿಳಿಯಿತು. ಶೆಟ್ಟರ್ ಆರೋಪ ಅಪ್ಪಟ ಸುಳ್ಳು. ನಾನು ಮೇಲ್ವರ್ಗದ ವಿರೋಧಿಯಲ್ಲ. ಸರಕಾರ ಜಾರಿಗೊಳಿಸಿದ ಹಲವಾರು ಕಾರ್ಯಕ್ರಮಗಳು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ನಮ್ಮದು ಅಹಿಂದ ಸರಕಾರ ಎಂದು ಒಪ್ಪಿಕೊಳ್ಳಲು ನನಗೆ ಯಾವುದೇ ಮುಜುಗರ ಇಲ್ಲ. ಹಾಗಂತ ಮೇಲ್ವರ್ಗದ ವಿರೋಧಿ ಎಂಬ ಆರೋಪ ಸರಿಯಲ್ಲ' ಎಂದರು.
"ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಅರ್ಧಗಂಟೆಯಲ್ಲೇ 6 ಪ್ರಮುಖ ಯೋಜನೆಗಳನ್ನು ಘೊಷಿಸಿದ್ದಕ್ಕೆ ಕೆಲವರು ಟೀಕೆ ಮಾಡಿದರು. ಆತುರದ ನಿರ್ಧಾರ ಎಂಬ ಆಕ್ಷೇಪ ಕೇಳಿ ಬಂತು. ಬಡವರ ಕೆಲಸಗಳನ್ನು ಆತುರದಿಂದಲೇ ಮಾಡಬೇಕು. ಹಸಿದವರಿಗೆ ಅನ್ನ ಹಾಕಲು, ಬಾಯಾರಿದವರಿಗೆ ನೀರು ಕೊಡಲು ತಡ ಮಾಡಬಾರದು" ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ.ಜ0ುಚಂದ್ರ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಸ್.ಎಸ್.ಮಲ್ಲಿಕಾರ್ಜುನ, ಉಮಾಶ್ರೀ, ಸಮಾಜ ಕಲ್ಯಾಣ ಸಚಿವ ಹಾಗೂ ಉಸ್ತುವಾರಿ ಸಚಿವ ಆಂಜನೇಯ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.







