ನೀರಿನ ಟ್ಯಾಂಕ್ ಗೆ ಹತ್ತಿ ಗ್ರಾಮಸ್ಥರನ್ನು ಬೆದರಿಸಿದ ಈತನ ಬೇಡಿಕೆ ಮಾತ್ರ ವಿಚಿತ್ರ!

ಮಂಡ್ಯ, ಮೇ 13: ಮದ್ಯವ್ಯಸನಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟು ನೀರಿನ ಟ್ಯಾಂಕ್ ಗೆ ಹತ್ತಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ಮಳವಳ್ಳಿ ತಾಲೂಕು ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಈತ ಬೇಡಿಕೆಯಿಟ್ಟಿದ್ದು, ಹಣಕ್ಕೋ ಇನ್ನಿತರ ಬೆಲೆಬಾಳುವ ವಸ್ತುಗಳಿಗೋ ಅಲ್ಲ. ಬದಲಾಗಿ, ಮದ್ಯ, ಬೀಡಿ, ಸಿಗರೇಟ್ ಮತ್ತು ಆರ್ ಸಿಬಿ ಟಿ ಶರ್ಟ್ ಗೆ!.
ಪ್ರಕರಣದ ವಿವರ: ಮದ್ಯವ್ಯಸನಿಯಾಗಿದ್ದ ಪ್ರಸನ್ನ ಎಂಬಾತ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಮದ್ಯ ಸಿಗದಿದ್ದ ಹಿನ್ನೆಲೆಯಲ್ಲಿ ಕೊನೆಗೆ ಬೇರೆ ದಾರಿ ಕಾಣದೆ ನೀರಿನ ಟ್ಯಾಂಕ್ ಮೇಲೇರಿ ಮದ್ಯಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಟ್ಯಾಂಕನ್ನು ಸುತ್ತುವರಿದ ಗ್ರಾಮಸ್ಥರು, ಪೊಲೀಸರು, ಅಗ್ನಿಶಾಮಕ ದಳದವರು ಈತನ ಮನವೊಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮದ್ಯದೊಂದಿಗೆ ಬೀಡಿ, ಸಿಗರೇಟ್ ಮತ್ತು ಆರ್‌ಸಿಬಿ ತಂಡದ ಟಿಷರ್ಟ್ ಬೇಕೆಂದು ಹಠಹಿಡಿದಿದ್ದ.
ಕೊನೆಗೆ ಬೇರೆ ದಾರಿ ಕಾಣದೆ ಪೊಲೀಸರು ಮದ್ಯ, ಬೀಡಿ, ಸಿಗರೇಟ್ ಮತ್ತು ಟಿ ಷರ್ಟ್ ತರಿಸಿ ಟ್ಯಾಂಕ್ ಬಳಿ ಇಟ್ಟ ನಂತರ ಕೆಳಗಿಳಿದಿದ್ದಾನೆ. ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.





