ಬಿಜೆಪಿಯ '150 ಮಿಷನ್' ಪಂಚರ್: ವಿ.ಆರ್.ಸುದರ್ಶನ್

ಮಡಿಕೇರಿ ಮೇ 13 : ಭಾರತೀಯ ಜನತಾ ಪಕ್ಷದ '150 ಮಿಷನ್' ಎನ್ನುವುದು ಉಪಚುನಾವಣೆಯ ಫಲಿತಾಂಶದೊಂದಿಗೆ ಪಂಚರ್ ಆಗಿದ್ದು, ಅವರು ಚುನಾವಣೆಗಳ ಸೆಮಿ ಫೈನಲ್‌ನಲ್ಲಿ ಔಟ್ ಆಗಿದ್ದಾರೆ ಎಂದು ಟೀಕಿಸಿರುವ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಹಾಗೂ ಹಾಲಿ ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್.ಸುದರ್ಶನ್, ಕಾಂಗ್ರೆಸ್ ಸರಕಾರದ ವಿರುದ್ಧ ಹತಾಶ ಮನೋಭಾವದಿಂದ ಬಿಜೆಪಿ ನೀಡುತ್ತಿರುವ ಹೇಳಿಕೆಗಳು ಖಂಡನೀಯವೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದರ್ಶನ್, ಕಾಂಗ್ರೆಸ್ ಮುಕ್ತ ಕರ್ನಾಟಕ ಎನ್ನುವುದು ಬಿಜೆಪಿಯ ಹಗಲುಗನಸಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಹಾಗೂ ವಿರೊಧ ಪಕ್ಷಗಳೆರಡು ಇರಬೇಕು ಎಂದರು. ಕರ್ನಾಟಕವನ್ನು ಹಸಿವು ಮುಕ್ತ, ಗುಡಿಸಲು ಹಾಗೂ ಶೋಷಣೆ ಮುಕ್ತ ರಾಜ್ಯವನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ಹೊರಟಿದೆ. ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲುಂಡು ಹತಾಶಗೊಂಡಿರುವ ಬಿಜೆಪಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿದೆ ಎಂದರು.
ಕೊಡಗು ಜಿಲ್ಲೆಗೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದೆ. ಕೇಂದ್ರ ಸರ್ಕಾರ ಕೂಡ ಪ್ರವಾಸೋದ್ಯಮಕ್ಕೆ ಪೂರಕವಾದ ವಿಶೇಷ ಕಾಯ್ದೆಯನ್ನು ಜಾರಿಗೆ ತರಲಿ ಎಂದು ಸುದರ್ಶನ್ ಒತ್ತಾಯಿಸಿದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 15 ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. 4 ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಸ್ ನೇರ ಸ್ಪರ್ಧೆ ಇದ್ದು, 11 ಜಿಲ್ಲೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತ್ರಿಕೋನ ಸ್ಪರ್ಧೆ ಏರ್ಪಡಲಿದೆ ಎಂದು ಭವಿಷ್ಯ ನುಡಿದರು.
2008ರಿಂದ 2013 ರವರೆಗೆ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಆರೋಗ್ಯ ಕ್ಷೇತ್ರಕ್ಕಾಗಿ 10,240 ಕೊಟಿ ರೂ. ಖರ್ಚು ಮಾಡಿದ್ದರೆ, ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 21,475 ಕೊಟಿ ರೂ.ಗಳನ್ನು ಖರ್ಚು ಮಾಡಿದೆ. ನಗರಾಭಿವೃದ್ಧಿಗಾಗಿ ಬಿಜೆಪಿ 30,113 ಕೊಟಿ ರೂ.ಗಳನ್ನು ಖರ್ಚು ಮಾಡಿದ್ದರೆ, ಕಾಂಗ್ರೆಸ್ ಸರ್ಕಾರ 58,671 ಕೊಟಿ ವೆಚ್ಚ ಮಾಡಿದೆ. ಗ್ರಾಮೀಣಾಭಿವೃದ್ಧಿಗಾಗಿ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ 20,664 ಕೋಟಿ ರೂ. ಖರ್ಚು ಮಾಡಿದ್ದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 52, 293 ಕೋಟಿ ರೂ. ವೆಚ್ಚ ಮಾಡಿದೆಯೆಂದು ಸುದರ್ಶನ್ ತಿಳಿಸಿದರು. ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡಿರುವುದರ ಬದಲು ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಪಿ. ರಮೇಶ್ ಮಾತನಾಡಿ, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮೈಸೂರು ವಿಭಾಗದ ಉಸ್ತುವಾರಿ ಜವಾಬ್ದಾರಿ ಹೊಂದಿರುವ ವಿಷ್ಣುನಾಥ್ ಅವರು ಇದೇ ಮೇ16 ರಂದು ಸಂಜೆ ಮಡಿಕೇರಿಗೆ ಆಗಮಿಸಲಿದ್ದು, ಮೇ17 ರಂದು ಜಿಲ್ಲೆಯ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿರುವುದಾಗಿ ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಟಿ.ಪಿ.ರಮೇಶ್ ಹಾಗೂ ವಕ್ತಾರ ಟಾಟು ಮೊಣ್ಣಪ್ಪ ಉಪಸ್ಥಿತರಿದ್ದರು. ಫೋಟೋ :: ಕಾಂಗ್ರೆಸ್







