ಚೀನಾ ಶೃಂಗಸಭೆ ಬಹಿಷ್ಕರಿಸಲು ಭಾರತ ನಿರ್ಧಾರ?
ಚೀನಾ-ಪಾಕ್ ಕಾರಿಡಾರ್ ಯೋಜನೆಗೆ ವಿರೋಧ

ಹೊಸದಿಲ್ಲಿ,ಮೇ 13: ರವಿವಾರ ಬೀಜಿಂಗ್‌ನಲ್ಲಿ ಆರಂಭಗೊಳ್ಳಲಿರುವ ಚೀನಾದ ಮಹತ್ವಾಕಾಂಕ್ಷಿ ‘ಒಂದೇ ವರ್ತುಲ, ಒಂದೇ ರಸ್ತೆ’ ಶೃಂಗಸಭೆಯಲ್ಲಿ ಭಾರತವು ಪಾಲ್ಗೊಳ್ಳುವ ಸಾಧ್ಯತೆಯಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ. ಬಂದರುಗಳು, ರೈಲ್ವೆ ಹಾಗೂ ರಸ್ತೆಗಳ ಮೂಲಕ ಗಡಿಯಾಚೆಗಿನ ಸಂಪರ್ಕವನ್ನು ಉತ್ತೇಜಿಸುವ ಉದ್ದೇಶದಿಂದ ಬೀಜಿಂಗ್ ಹಮ್ಮಿಕೊಂಡಿರುವ ಈ ಶೃಂಗಸಭೆಯನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆಯೆಂದು ಅವು ಹೇಳಿವೆ.
ಈ ಯೋಜನೆಯ ಒಂದು ಭಾಗವಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪೆಕ್), ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ವಿರುದ್ಧ ಭಾರತವು ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರವು ತನ್ನ ಭಾಗವೇ ಹೊರತು, ಪಾಕಿಸ್ತಾನದ್ದಲ್ಲವೆಂದು ಅದು ಪ್ರತಿಪಾದಿಸುತ್ತಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ವಿದೇಶಾಂಗ ಸಚಿವಾಲಯವು ಈತನಕ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ. ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆ ಅವರು ಈ ಬಗ್ಗೆ ಯಾವುದೇ ನಿರ್ಧಾರವನ್ನು ಸರಕಾರ ಕೈಗೊಂಡಿಲ್ಲವೆಂದು, ವಾರದ ಆರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.‘‘ಸಿಪೆಕ್ ಯೋಜನೆಯು ಭಾರತದ ಸಾರ್ವಭೌಮ ಪ್ರಾಂತ್ಯದ ಮೂಲಕ ಹಾದುಹೋಗುತ್ತದೆ. ಈ ನಿಟ್ಟಿನಲ್ಲಿ ನಾವು ನಮ್ಮ ಅಭಿಪ್ರಾಯಗಳನ್ನು ಚೀನಾಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’’ ಎಂದವರು ಹೇಳಿದ್ದರು.
ಆದರೆ ಭಾರತದ ಈ ಆತಂಕಗಳನ್ನು ಚೀನಾವು ತಳ್ಳಿಹಾಕಿದೆ. ಕಳೆದ ವಾರ ಭಾರತದಲ್ಲಿನ ಚೀನಾ ರಾಯಭಾರಿ ಲುವೊ ಝಾವೊಯಿ ಈ ಬಗ್ಗೆ ಹೇಳಿಕೆ ನೀಡಿ, ಈ ಯೋಜನೆಯನ್ನು ಹೊಸದಿಲ್ಲಿಯು ಆರ್ಥಿಕ ದೃಷ್ಟಿಕೋನದಿಂದ ನೋಡಬೇಕೇ ಹೊರತು ಸಾರ್ವಭೌಮತೆಯ ದೃಷ್ಟಿಯಿಂದಲ್ಲವೆಂದು ತಿಳಿಸಿದ್ದರು.
ಚೀನಾದಿಂದ ಯುರೋಪ್‌ವರೆಗೆ ಹರಡಲಿರುವ ಈ ಬೃಹತ್ ರಸ್ತೆ ಯೋಜನೆ ಕುರಿತ ಶೃಂಗಸಭೆಯಲ್ಲಿ 29 ರಾಷ್ಟ್ರಗಳ ಮುಖಂಡರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಏಶ್ಯದಲ್ಲಿ ತನ್ನ ಪ್ರಾಬಲ್ಯವನ್ನು ಬಲಪಡಿಸುವ ದೂರದೃಷ್ಟಿಯೊಂದಿಗೆ ಚೀನಾ ಕೈಗೊಂಡಿರುವ ಈ ಯೋಜನೆಗೆ ಮುಂಬರುವ ದಶಕಗಳಲ್ಲಿ ಲಕ್ಷಾಂತರ ಕೋಟಿ ಡಾಲರ್‌ಗಳನ್ನು ವ್ಯಯಿಸುವ ನಿರೀಕ್ಷೆಯಿದೆ.
ಭಾರತದ ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ ಹಾಗೂ ಶ್ರೀಲಂಕಾ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿವೆ. ಅಮೆರಿಕ ಕೂಡಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಆ ಮೂಲಕ ತನ್ನ ಹಿಂದಿನ ನಿಲುವಿನಿಂದ ಯುಟರ್ನ್ ಹೊಡೆದಿದೆ.







