ಎಸ್‌ಬಿಐನ ಮೊಬೈಲ್ ವ್ಯಾಲೆಟ್ ಸೇವೆಗೆ ಶುಲ್ಕ: ಬ್ಯಾಂಕ್ ನೌಕರರ ಒಕ್ಕೂಟದ ವಿರೋಧ

ಚೆನ್ನೈ, ಮೇ 13: ಮೊಬೈಲ್ ವ್ಯಾಲೆಟ್ ಮೂಲಕ ನಡೆಸುವ ವ್ಯವಹಾರಗಳಿಗೆ ಶುಲ್ಕಗಳನ್ನು ವಿಧಿಸುವ ಕುರಿತಾದ ಪ್ರಸ್ತಾಪಿತ ಯೋಜನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಕೈಬಿಡಬೇಕೆಂದು, ಭಾರತೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟವು ಆಗ್ರಹಿಸಿದೆ.
ಬ್ಯಾಂಕ್‌ನ ಮೊಬೈಲ್ ವ್ಯಾಲೆಟ್ ಬಳಸಿಕೊಂಡು ಎಟಿಎಂಗಳ ಮೂಲಕ ನಗದು ಹಣವನ್ನು ಹಿಂಪಡೆಯು ನೂತನ ಸೌಲಭ್ಯವನ್ನು ತಾನು ಆರಂಭಿಸಲಿರುವುದಾಗಿ ಎಸ್‌ಬಿಐ ಕಳೆದ ವಾರ ತಿಳಿಸಿತ್ತು. ಈ ಸೌಲಭ್ಯದ ಮೂಲಕ ಗ್ರಾಹಕರು ಪ್ರತಿಬಾರಿ ಹಣ ಹಿಂಪಡೆಯುವಾಗಲೂ 25 ರೂ. ಶುಲ್ಕವನ್ನು ವಿಧಿಸುವುದಾಗಿ ಅದು ತಿಳಿಸಿತ್ತು.
ಭಾರತೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಪಿ.ಕೃಷ್ಣನ್ ಅವರು, ಈ ಯೋಜನೆಯನ್ನು ಎಸ್‌ಬಿಐ ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಈಗಾಗಲೇ ಭಾರತದ ಶೇ.25ರಷ್ಟು ಬ್ಯಾಂಕಿಂಗ್ ಉದ್ಯಮವು, ಎಸ್‌ಬಿಐನ ನಿಯಂತ್ರಣದಲಿದೆ. ಈ ವರ್ಷದ ಎಪ್ರಿಲ್ 1ರಂದು ಐದು ಉಪ ಬ್ಯಾಂಕ್‌ಗಳು ವಿಲೀನಗೊಂಡಿರುವುದರಿಂದ ಅದು ಈಗ ಶೇ.33ರಷ್ಟು ಬ್ಯಾಂಕಿಂಗ್ ಉದ್ಯಮದ ಮೇಲೆ ನಿಯಂತ್ರಣ ಹೊಂದಿದೆ ಎಂದು ಕೃಷ್ಣನ್ ಗಮನಸೆಳೆದರು.
ಮೊಬೈಲ್ ವ್ಯಾಲೆಟ್ ಸೇವೆಯ ಜೊತೆಗೆ ಶಿಥಿಲಗೊಂಡ ನೋಟುಗಳ ವಿನಿಮಯಕ್ಕೂ ಶುಲ್ಕವನ್ನು ವಿಧಿಸಲೂ ಎಸ್‌ಬಿಐ ಯೋಚಿಸುತ್ತಿರುವುದಾಗಿ ಅವರು ತಿಳಿಸಿದರು.
‘‘ಭಾರತೀಯ ಸ್ಟೇಟ್‌ಬ್ಯಾಂಕ್‌ನ ಆಡಳಿತವು ಸೇವಾ ಶುಲ್ಕ ಹಾಗೂ ದಂಡಗಳನ್ನು ವಿಧಿಸುವ ಹೆಸರಿನಲ್ಲಿ ಶ್ರೀಸಾಮಾನ್ಯರು ಹಾಗೂ 25 ಕೋಟಿಯಷ್ಟಿರುವ ಎಸ್‌ಬಿಐ ಗ್ರಾಹಕರ ಮೇಲೆ ಸಮರವನ್ನು ಆರಂಭಿಸಿದೆ. ಎಸ್‌ಬಿಐನ ಈ ಕ್ರಮವು ಸಾರ್ವಜನಿಕ ರಂಗದ ಇತರ ಬ್ಯಾಂಕ್‌ಗಳಿಗೂ ಕೆಟ್ಟದೊಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಂತಾಗುವುದು ’’ ಎಂದು ಕೃಷ್ಣನ್ ಟೀಕಿಸಿದ್ದಾರೆ.