ಹೊಟೇಲ್ ಉದ್ದಿಮೆದಾರರ ಆತಂಕ ನಿವಾರಿಸಲು ಕ್ರಮ: ಕೇಂದ್ರ ಸಚಿವ ಅನಂತ್‌ಕುಮಾರ್
ಜಿಎಸ್‌ಟಿ ಹೊರೆ

ಬೆಂಗಳೂರು, ಮೇ 13: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಜಾರಿಯಿಂದ ಹೊಟೇಲ್ ಉದ್ದಿಮೆದಾರರಲ್ಲಿ ಉಂಟಾಗಿರುವ ಆತಂಕವನ್ನು ಕೇಂದ್ರ ಹಣಕಾಸು ಸಚಿವರ ಮುಂದೆ ಸಮರ್ಥವಾಗಿ ಮಂಡಿಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಭರವಸೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಹೊಟೇಲ್ ಉದ್ದಿಮೆದಾರರ ಸಹಕಾರ ಬ್ಯಾಂಕಿನ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ಬ್ಯಾಂಕುಗಳ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನಕ್ಕೆ ತರಲಾಗುವುದು ಎಂದರು.
ಜಿಎಸ್ಟಿ ಜಾರಿಗೆ ಬಂದರೆ ಹೊಟೇಲ್ ಉದ್ದಿಮೆದಾರರು ಶೇ.18ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ಉದ್ದಿವೆುದಾರರ ನಿಯೋಗವನ್ನು ಕೇಂದ್ರ ಹಣಕಾಸು ಸಚಿವರ ಬಳಿಗೆ ಕರೆದೊಯ್ದು ತಮ್ಮ ಅಭಿಪ್ರಾಯ ಹಾಗೂ ಆತಂಕವನ್ನು ಸಚಿವರ ಮುಂದೆ ಸಮರ್ಥವಾಗಿ ಮಂಡಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಕುಮಾರ್ ಮಾತನಾಡಿ, ಹೊಟೇಲ್ ಇಂದು ಪ್ರತಿ ಕುಟುಂಬದಲ್ಲೂ ಹಾಸು ಹೊಕ್ಕಾಗಿದೆ. ಹೊಟೇಲ್ಲಿಲ್ಲದೆ ಬದುಕಲಾರದಂತಹ ಸ್ಥಿತಿ ಇದೆ. ಪ್ರತಿ ಕುಟುಂಬವೂ ಹೊಟೇಲ್ ಅನ್ನು ಅವಲಂಬಿಸಿದೆ ಎಂದ ಅವರು, ರಾಜ್ಯದಲ್ಲಿರುವ ಪ್ರವಾಸಿ ತಾಣಗಳಿಗೆ ಬರುವವರಿಗೆ ಉತ್ತಮ ಆಹಾರ ಸಿಗುತ್ತಿಲ್ಲ. ಈ ಬಗ್ಗೆ ಉದ್ಯಮದವರು ಗಮನಹರಿಸಬೇಕು ಎಂದರು.
ಉಡುಪಿ ಸುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿ, ಸಭಾಪತಿ ಶಂಕರ ಮೂರ್ತಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಉದ್ಯಮಿ ಡಾ.ಪಿ. ಸದಾನಂದ ಮಯ್ಯ, ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಚ್.ಜೆ.ಆನಂದರಾಮ್, ಬ್ಯಾಂಕಿನ ಅಧ್ಯಕ್ಷ ಪಿ.ಎನ್.ಶ್ರೀಪತಿ ರಾವ್, ಬೆಂ.ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಮುನಿರಾಜು ಹಾಜರಿದ್ದರು.
‘ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇದೀಗ ಒಟ್ಟಾರೆ ರಾಷ್ಟ್ರೀಕೃತ ಬ್ಯಾಂಕುಗಳ ಎನ್‌ಟಿಎ 6 ಲಕ್ಷ ಕೋಟಿ ರೂ.ದಾಟಿದೆ. ಸಾರ್ವಜನಿಕರ ಹಣವನ್ನು ಹಗಲು ದರೋಡೆ ಮಾಡುತ್ತಿರುವುದಕ್ಕೆ ಇದು ನಿದರ್ಶನ’
-ಎನ್.ಕುಮಾರ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ







