ಹಿರಿಯ ಮಹಿಳಾ ಸಾಹಿತಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ: ಡಾ.ವೀಣಾ ಶಾಂತೇಶ್ವರ್ ಒತ್ತಾಯ
ಎಂ.ಕೆ.ಇಂದಿರಾ -ವಾಣಿ ಜನ್ಮ ಶತಮಾನೋತ್ಸವ

ಬೆಂಗಳೂರು, ಮೇ 13: ನಾಡಿನ ಹಿರಿಯ ಸಾಹಿತಿಗಳಾದ ಎಂ.ಕೆ.ಇಂದಿರಾ, ತ್ರಿವೇಣಿ ಹಾಗೂ ಶಾಂತಾದೇವಿ ಮಾಳವಾಡ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ರಚಿಸಿ, ಅವರ ಸಾಹಿತ್ಯದ ಕುರಿತು ಹೆಚ್ಚಿನ ಸಂಶೋಧನೆಗಳಾಗಬೇಕು ಎಂದು ಹಿರಿಯ ಸಾಹಿತಿ ಡಾ.ವೀಣಾ ಶಾಂತೇಶ್ವರ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘ ನಗರದ ಕಸಾಪದಲ್ಲಿ ಆಯೋಜಿಸಿದ್ದ ಹಿರಿಯ ಕಾದಂಬರಿಗಾರ್ತಿಯರಾದ ಎಂ.ಕೆ.ಇಂದಿರಾ ಮತ್ತು ವಾಣಿರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂ.ಕೆ.ಇಂದಿರಾ, ವಾಣಿ, ಶಾಂತಾದೇವಿ ಮಾಳವಾಡ ಸೇರಿದಂತೆ ಅನೇಕ ಹಿರಿಯ ಮಹಿಳಾ ಬರಹಗಾರರು ಪುರಷ ಪ್ರಧಾನ ವ್ಯವಸ್ಥೆಯ ನೋವು, ಅಪಮಾನಗಳನ್ನು ಅನುಭವಿಸಿ ಹತ್ತಾರು ಕಾದಂಬರಿ, ನೂರಾರು ಕತೆಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಆದರೆ, ಆ ಸಾಹಿತಿಗಳ ಬರಹಗಳ ಕುರಿತು ವಸ್ತುನಿಷ್ಠ ವಿಮರ್ಶೆಗಳನ್ನು ನಡೆಸದೆ ನಿರ್ಲಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ರಚಿಸಿ ಸಂಶೋಧನಾ ಅಧ್ಯಯನಗಳು ನಡೆಯಬೇಕೆಂದು ಆಶಿಸಿದರು.
ಪ್ರತಿವರ್ಷ ವಿಶ್ವವಿದ್ಯಾಲಯಗಳಲ್ಲಿ ಹಿರಿಯ ಸಾಹಿತಿಗಳ ಬರಹಗಳ ಕುರಿತು ವಿಮರ್ಶೆಗಳು ನಡೆಯುತ್ತವೆ. ಹಾಗೂ ಆ ವಿಮರ್ಶೆಗಳನ್ನು ಒಟ್ಟುಗೂಡಿಸಿ ಕೃತಿ ರೂಪಕ್ಕೆ ತರಲಾಗುತ್ತದೆ. ಆದರೆ, ಈ ಯಾವ ವಿಮರ್ಶೆಗಳಲ್ಲೂ ಹಿರಿಯ ಸಾಹಿತಿಗಳಾದ ಎಂ.ಕೆ.ಇಂದಿರಾ, ವಾಣಿಯವರು ಇಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ಅವರು ವಿಷಾದಿಸಿದರು.
ಯುವ ಸಾಹಿತಿಗಳಿಗೆ ಮಾದರಿ: ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸಬಿಹಾ ಭೂಮಿಗೌಡ ಮಾತನಾಡಿ, ನಮ್ಮ ಶಿಕ್ಷಣ ವ್ಯವಸ್ಥೆಗೂ ಸೃಜನಾತ್ಮಕತೆಗೂ ಯಾವುದೇ ಸಂಬಂಧ ಇಲ್ಲವೆಂಬುದು ಎಂ.ಕೆ.ಇಂದಿರಾ, ವಾಣಿರವರ ಬದುಕು-ಬರಹ ನಮಗೆ ಉದಾಹರಣೆಯಾಗಿದೆ. ಕೇವಲ ಪ್ರಾಥಮಿಕ ತರಗತಿಗಳನ್ನಷ್ಟೆ ಮುಗಿಸಿದ್ದ ಈ ಸಾಹಿತಿಗಳು ಸೃಜನಾತ್ಮಕ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದರು. ಹೀಗಾಗಿ ಇವರ ಬದುಕು ಯುವ ಜನತೆಗೆ ಮಾದರಿಯಾಗಲಿ ಎಂದು ಆಶಿಸಿದರು.
ಮಹಿಳಾ ಸಾಹಿತ್ಯ ಬರಹಗಳನ್ನು ಪುರುಷ ದೃಷ್ಟಿಕೋನದಿಂದ ನೋಡುವ ಮೂಲಕ ಮಹಿಳಾ ಮತ್ತು ಪುರುಷ ವಿಮರ್ಶಕರು ಮಾಡುವ ವಿಮರ್ಶೆಗಳನ್ನು ಮುಖಾಮುಖಿಯಾಗಿಸಿ ಹೊಸ ಸತ್ಯಗಳನ್ನು ಕಂಡುಕೊಳ್ಳಬೇಕಾಗಿದೆ. ಆ ಮೂಲಕ ಭೂತಕಾಲದ ಸಾಹಿತ್ಯ ಬರಹಗಳಿಂದ ಹೊಸ ಅನುಭವಗಳನ್ನು ಪಡೆಯಬೇಕೆಂದು ಅವರು ಅಭಿಪ್ರಾಯಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಮಾತನಾಡಿ, ಎಂ.ಕೆ.ಇಂದಿರಾ, ವಾಣಿ, ತ್ರಿವೇಣಿ ಸೇರಿದಂತೆ ಹಿರಿಯ ಮಹಿಳಾ ಸಾಹಿತಿಗಳ ಜಯಂತಿಗಳನ್ನು ಸರಕಾರದ ವತಿಯಿಂದ ಆಚರಿಸಿ ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಭೆ ನಡೆಸಿದ್ದು, ಶೀಘ್ರವಾಗಿ ತೀರ್ಮಾನ ಕೈಗೊಳ್ಳಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿಗಳ ಸಾಹಿತ್ಯವನ್ನು ಯುವ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಎಂ.ಕೆ.ಇಂದಿರಾ, ವಾಣಿರವರು ರಚಿಸಿರುವ ಸಾಹಿತ್ಯ ಕೃತಿಗಳ ಕುರಿತು ಪರಿಚಿಸುವುದಕ್ಕಾಗಿ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ್, ಹಿರಿಯ ಕವಯತ್ರಿ ಎಚ್.ಎಲ್.ಪುಷ್ಪಾ, ಡಾ. ವಿಜಯಮ್ಮ, ಮಹಿಳಾ ಸಾಹಿತಿಗಳಾದ ವೈ.ಕೆ.ಸಂಧ್ಯಾಶರ್ಮಾ, ಆರತಿ ಆನಂದ, ಡಾ.ಸರಸ್ವತಿ ಚಿಮ್ಮಲಗಿ, ಡಾ.ವಿಜಯಶ್ರೀ ಸಬರದ, ಡಾ.ಪ್ರಜ್ಞಾ ಮತ್ತಿಹಳ್ಳಿ ಮತ್ತಿತರರಿದ್ದರು.
ಈ ಬಾರಿ ನಡೆಯುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಾಹಿತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಆ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಹೊಸ ತಲೆಮಾರಿನ ಮಹಿಳಾ ಬರಹಗಾರರಿಗೆ ಹೊಸ ಸ್ಫೂರ್ತಿಯನ್ನು ನೀಡಬೇಕು.
-ವಸುಂಧರಾ ಭೂಪತಿ ಅಧ್ಯಕ್ಷೆ, ಕರ್ನಾಟಕ ಲೇಖಕಿಯರ ಸಂಘ
ಹಿರಿಯ ಸಾಹಿತಿಗಳಾದ ಎಂ.ಕೆ.ಇಂದಿರಾ ಹಾಗೂ ವಾಣಿಯವರ ಎರಡು ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುಂದಿನ ಒಂದು ವರ್ಷದ ಒಳಗೆ ಮರು ಮುದ್ರಿಸಲಾಗುವುದು. ಹಾಗೂ ಎಂ.ಕೆ.ಇಂದಿರಾ, ತ್ರಿವೇಣಿ ಹಾಗೂ ಶಾಂತಾದೇವಿ ಮಾಳವಾಡ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲು ಸರಕಾರಕ್ಕೆ ಮನವಿ ಮಾಡಲಾಗುವುದು.
-ಡಾ.ಮನುಬಳಿಗಾರ್ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್







