ಕೇರಳ: ಬಿಜೆಪಿಯಿಂದ ಬೀಫ್ ವಿರುದ್ಧ ಹರತಾಳ, ಸಿಪಿಎಂನಿಂದ "ಬೀಫ್ ಉತ್ಸವ"

ಕೊಲ್ಲಂ, ಮೇ 13: ಕೊಲ್ಲಂ ಜಿಲ್ಲೆಯ ನೆಡುಂಪನ ಗ್ರಾಪಂ ವ್ಯಾಪ್ತಿಯಲ್ಲಿ ಬೀಫ್ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಹರತಾಳಕ್ಕೆ ಕರೆ ನೀಡಿದ್ದ ಬಿಜೆಪಿಗೆ ಬೀಫ್ ಉತ್ಸವ ನಡೆಸುವ ಮೂಲಕ ಸಿಪಿಎಂ ತಿರುಗೇಟು ನೀಡಿದೆ.
ಬಿಜೆಪಿಯ ಹರತಾಳಕ್ಕೆ ವಿರುದ್ಧವಾಗಿ ಸಿಪಿಎಂ ಮತ್ತು ಡಿವೈಎಫ್ ಐ ಪಂಚಾಯತ್ ನಾದ್ಯಂತ ಬೀಫ್ ಪದಾರ್ಥ ವಿತರಿಸಿದ್ದಲ್ಲದೆ ಬೀಫ್ ಉತ್ಸವ ನಡೆಸಿದೆ. ನಲ್ಲಿಲಾ ಮಾರ್ಕೆಟ್ ಏರಿಯಾದಲ್ಲಿನ ಬೀಫ್ ಸ್ಟಾಲ್ ಗಳ ವಿರುದ್ಧ ಕೆಲವು ತಿಂಗಳುಗಳಿಂದ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಹರತಾಳಕ್ಕೆ ಕರೆ ನೀಡಿದ್ದು, ಇದೇ ಮೊದಲ ಬಾರಿಯಾಗಿದೆ.
“ಅಲ್ಪಸಂಖ್ಯಾತ ಜನರೇ ಹೆಚ್ಚಿರುವ ವ್ಯಾಪ್ತಿಯಲ್ಲಿ ಹರತಾಳ ಮಾಡುವ ಮೂಲಕ ಬಿಜೆಪಿಯು ಸಂಘಪರಿವಾರದ ಅಜೆಂಡಾವನ್ನು ಹೇರಲು ಯತ್ನಿಸುತ್ತಿದೆ. ಕೋಮುಗಲಭೆಯನ್ನು ಸೃಷ್ಟಿಸಲು ಅವರು ಯತ್ನಿಸುತ್ತಿದ್ದು, ಕೋಮುದ್ವೇಷವನ್ನು ಬೇರೆಡೆಗೂ ಹರಡುವ ಯತ್ನ ಅವರದ್ದಾಗಿದೆ. ಈ ಪ್ರದೇಶದಲ್ಲಿ ಇದುವರೆಗೂ ಕೋಮುಗಲಭೆಯಂತಹ ಘಟನೆಗಳು ನಡೆದಿಲ್ಲ. ನೆಡುಂಪಾನಾ ಪಂಚಾಯತ್ ನಾದ್ಯಾಂತ ಹರತಾಳ ನಡೆಸದ ಬಿಜೆಪಿ, ಅಲ್ಪಸಂಖ್ಯಾತರೇ ಹೆಚ್ಚಿರುವ ನಲ್ಲಿಲಾ ಪ್ರದೇಶದಲ್ಲಿ ಮಾತ್ರ ಹರತಾಳ ನಡೆಸುತ್ತಿದೆ” ಎಂದು ನಲ್ಲಿಲಾ ಪಂಚಾಯತ್ ವಾರ್ಡ್ ಸದಸ್ಯ ಥೋಮಸ್ ಕೋಶಿ ಹೇಳಿದ್ದಾರೆ.
ಅಕ್ರಮ ಬೀಫ್ ಸ್ಟಾಲ್ ಗಳ ವಿರುದ್ಧ ಪಂಚಾಯತ್ ಹಾಗೂ ಪೊಲೀಸರಿಗೆ ದೂರು ನೀಡಲಾಗಿತ್ತು. ಲೈಸೆನ್ಸ್ ಗಳನ್ನು ಹೊಂದಿರದ ಅನೇಕ ಸ್ಟಾ;ಲ್ ಗಳು ಮಾರುಕಟ್ಟೆಯಲ್ಲಿವೆ. ಪಂಚಾಯತ್ ಆಗಲಿ ಪೊಲೀಸರಾಗಲೀ ನಮ್ಮ ದೂರಿಗೆ ಸ್ಪಂದಿಸಿಲ್ಲ. ಆದ್ದರಿಂದ ಹರತಾಳ ಮಾಡಬೇಕಾಯಿತು ಎಂದು ಬಿಜೆಪಿ ಹೇಳಿದೆ.
ಕೋಮು ಸಾಮರಸ್ಯವನ್ನು ಹಾಳುಗೆಡವಲೆಂದೇ ಬಿಜೆಪಿ ಹರತಾಳಕ್ಕೆ ಕರೆ ನೀಡಿದೆ ಎಂಧು ಸಿಪಿಎಂ ಮತ್ತು ಡಿವೈಎಫ್ ಐ ಆರೋಪಿಸಿದೆ.
ಸಂಘಪರಿವಾರದ ಧೋರಣೆಯ ವಿರುದ್ಧ ಕೇರಳದಾದ್ಯಂತ ಅನೇಕ ಬೀಫ್ ಉತ್ಸವಗಳು ನಡೆದಿತ್ತು. ಕೇರಳದಲ್ಲಿ ಬೀಫ್ ಬ್ಯಾನ್ ಮಾಡುವ ಕುರಿತು ಸಂಘಪರಿವಾರದ ನೀತಿಯನ್ನು ತಾವು ಬೆಂಬಲಿಸುವುದಿಲ್ಲ ಎಂದು ಅನೇಕ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದರು.