ಬಲಪಂಥೀಯ ಗುಂಪಿನಿಂದ ಕೊಲೆ ಬೆದರಿಕೆ : ಗೃಹಸಚಿವರಿಗೆ ಆಪ್ ನಾಯಕನ ದೂರು

ಹೊಸದಿಲ್ಲಿ,ಮೇ 13: ಬಲಪಂಥೀಯ ಗುಂಪಿನಿಂದ ತನಗೆ ಕೊಲೆ ಬೆದರಿಕೆ ಬಂದಿದೆ ಎಂದು ಶನಿವಾರ ದೂರಿಕೊಂಡಿರುವ ಆಪ್ ನಾಯಕ ಆಶಿಷ್ ಖೇತಾನ್ ಅವರು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಆಗ್ರಹಿಸಿದ್ದಾರೆ.
‘‘ಹಿಂದು ಸಂತರ ವಿರುದ್ಧ ಪಾಪಗಳನ್ನೆಸಗುವುದರಲ್ಲಿ ನೀವು ಎಲ್ಲ ಹಂತಗಳನ್ನು ದಾಟಿದ್ದೀರಿ. ನಿಮ್ಮಿಂದಾಗಿಯೇ ಸಾಧ್ವಿ ಪಜ್ಞಾಸಿಂಗ್(ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ) ಮತ್ತು ವೀರೇಂದ್ರ ಸಿಂಗ್ ತಾವ್ಡೆ(ದಾಭೋಲ್ಕರ್ ಕೊಲೆ ಪ್ರಕರಣದ ಆರೋಪಿ) ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಹಿಂದು ರಾಷ್ಟ್ರದಲ್ಲಿ ನಿಮ್ಮಂತಹವರು ಮರಣದಂಡನೆಗೆ ಮಾತ್ರ ಯೋಗ್ಯರು ’’ ಎಂದು ಉಲ್ಲೇಖಿಸಲಾಗಿರುವ ಪತ್ರವೊಂದು ತನಗೆ ಮೇ 9ರಂದು ಬಂದಿದೆ ಎಂದು ಖೇತಾನ್ ತಿಳಿಸಿದರು.
ಹಲವಾರು ಪತ್ರಕರ್ತರು, ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಬಲಪಂಥೀಯ ಶಕ್ತಿಗಳಿಂದ ಬೆದರಿಕೆಗಳು ಬಂದಿವೆ ಎಂದೂ ಅವರು ಹೇಳಿದರು.
ಪತ್ರಕರ್ತ-ರಾಜಕಾರಣಿ ಖೇತಾನ್‌ಗೆ ಕಳೆದ ವರ್ಷವೂ ಇಂತಹುದೇ ಬೆದರಿಕೆ ಪತ್ರ ಬಂದಿತ್ತು.
ಇದೊಂದು ಅತ್ಯಂತ ಆಘಾತಕಾರಿ ಘಟನೆ ಎಂದು ಹೇಳಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಗೃಹಸಚಿವರಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ.