ಮೇ 14ರಂದು ಬಡ ಕುಟುಂಬಗಳಿಗೆ ಮನೆಗಳ ಹಸ್ತಾಂತರ

ಮಂಗಳೂರು, ಮೇ 13: ಆರ್ಥಿಕವಾಗಿ ಹಿಂದುಳಿದವರಿಗೆ ಮನೆಯನ್ನು ನಿರ್ಮಿಸಿಕೊಡುವ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸೌಹಾರ್ದ ಪ್ರತಿಷ್ಠಾನದ ವತಿಯಿಂದ ಮೂರನೆ ಯೋಜನೆಯ 32 ಮನೆಗಳ ಹಸ್ತಾಂತರವು ಮೇ 14ರಂದು ಸಂಜೆ 5:30ಕ್ಕೆ ಬೆಳುವಾಯಿ ಗ್ರಾಮದ ಮುರ್ಕೊತ್‌ಪಲ್ಕೆ ಎಂಬಲ್ಲಿ ನಡೆಯಲಿದೆ.
ಮುರ್ಕೊತ್‌ಪಲ್ಕೆಯಲ್ಲಿ 5 ಎಕರೆ ಜಾಗದಲ್ಲಿ ಮೂಡಾ ಮಾದರಿಯಂತೆ 104 ಮನೆಗಳ ಕಾರ್ಯಸೂಚಿಯನ್ನು ಹಮ್ಮಿಕೊಂಡು 2016ನೆ ಸಾಲಿನಲ್ಲಿ ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. 104 ಮನೆಗಳನ್ನು ನಾಲ್ಕು ಕಂತುಗಳಲ್ಲಿ 2020ನೆ ಇಸವಿಯವರೆಗೆ ನಿರ್ಮಾಣ ಮಾಡಲಾಗುವುದು. ಮೊದಲ ಕಂತಿನ 32 ಮನೆಗಳು ನಿರ್ಮಾಣಗೊಂಡಿದ್ದು, ಆಯ್ದ ಅರ್ಹ ಫಲಾನುಭವಿಗಳಿಗೆ ಮೇ 14ರಂದು ಹಸ್ತಾಂತರಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.
ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಎರಿಕ್ ಕೊರೆಯಾ, ಟ್ರಸ್ಟಿಗಳಾಗಿ ಜಾನ್ ಎಲ್.ಡಿಸೋಜ, ಲೂವಿಸ್ ಜೆ.ಪಿಂಟೊ, ಟಾಯ್ಟಸ್ ನೊರೊನ್ಹಾ ಮತ್ತು ಫಾದರ್ ಜೆ.ಬಿ.ಸಲ್ದಾನ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
Next Story





