ದೂರುರಹಿತ ಹಕ್ಕುಪತ್ರ ವಿತರಣೆ ರಾಜ್ಯ ಸರಕಾರದ ಗುರಿ: ಪಿಣರಾಯಿ ವಿಜಯನ್

ಕಾಸರಗೋಡು, ಮೇ 13: ದೂರುರಹಿತ ಹಕ್ಕುಪತ್ರ ವಿತರಣೆ ರಾಜ್ಯ ಸರಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರಕಾರದ ಒಂದನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಞoಗಾಡ್ ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಹಕ್ಕುಪತ್ರ ವಿತರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಕ್ಕುಪತ್ರ ವಿತರಣೆಗೆ ಸಂಬಂಧಪಟ್ಟಂತೆ ಹಲವು ವಿವಾದಗಳು ಕೇಳಿಬರುತ್ತಿದೆ. ಇಂತಹ ದೂರು, ವಿವಾದಗಳನ್ನು ಪರಿಹರಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಕ್ಕುಪತ್ರ ವಿತರಣೆಯನ್ನು ಶೀಘ್ರ ಮಾಡಲಾಗುವುದು. ಅರ್ಹ ಎಲ್ಲರಿಗೂ ಭೂಮಿಯನ್ನು ವಿತರಿಸಲಾಗುವುದು ಎಂದು ಹೇಳಿದರು .
ಕುಂಬಳೆ ಬಂಬ್ರಾಣ ಗ್ರಾಮದಲ್ಲಿ ನಾಲ್ಕು ವಿಕಲಚೇತನರು ಸೇರಿದಂತೆ 12 ಕುಟುಂಬಗಳಿಗೆ ಸರಕಾರ ಸ್ಥಳ ನೀಡಿದೆ. ಹೈಕೋರ್ಟ್ ಆದೇಶದಂತೆ ಕಯ್ಯಾರು ಗ್ರಾಮದಲ್ಲಿ 69 ಕುಟುಂಬಗಳಿಗೆ ಭೂಮಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು .
ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಕರುಣಾಕರನ್ , ಶಾಸಕರಾದ ಪಿ.ಬಿ. ಅಬ್ದುರ್ರಝಾಕ್ , ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್, ಎ.ರಾಜಗೋಪಾಲ್, ಜಿಲ್ಲಾಧಿಕಾರಿ ಕೆ. ಜೀವನ್ ಬಾಬು, ಕಂದಾಯ ಅಧಿಕಾರಿ ಪಿ.ಕೆ. ಜಯಶ್ರೀ ಹಾಗೂ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.







