ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಬಜರಂಗ್ ಪುನಿಯಾಗೆ ಬಂಗಾರದ ಪದಕ

ಹೊಸದಿಲ್ಲಿ,ಮೇ 13: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬಜರಂಗ್ ಪೂನಿಯಾ ಬಂಗಾರದ ಪದಕ ಜಯಿಸಿದ್ದಾರೆ. ಶನಿವಾರ ನಡೆದ ಪುರುಷರ 55 ಕೆಜಿ ಫ್ರೀಸ್ಟೈಲ್ ವೀಭಾಗದ ಫೈನಲ್‌ನಲ್ಲಿ ಲೀ ಸಿಯುಂಗ್-ಚುಲ್‌ರನ್ನು 6-2 ಅಂತರದಿಂದ ಸೋಲಿಸಿದ ಬಜರಂಗ್ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟರು.
ಇದೇ ವೇಳೆ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದ ಸರಿತಾ ಕಿರ್ಜಿಸ್ತಾನದ ಟೈನಿಬೊಕೊವಾ ವಿರುದ್ಧ 0-6 ರಿಂದ ಶರಣಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಭಾರತೀಯ ಮಹಿಳಾ ಕುಸ್ತಿಪಟುಗಳು ಈ ಬಾರಿಯ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದು, ಈತನಕ 4 ಬೆಳ್ಳಿ ಸಹಿತ 6 ಪದಕಗಳನ್ನು ಜಯಿಸಿದ್ದಾರೆ.
2003ರ ಆವೃತ್ತಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಎರಡು ಬೆಳ್ಳಿ ಹಾಗೂ ಮೂರು ಕಂಚು ಸಹಿತ ಒಟ್ಟು ಐದು ಪದಕಗಳನ್ನು ಜಯಿಸಿತ್ತು.
ಮಹಿಳೆಯರ 58 ಕೆಜಿ ತೂಕ ವಿಭಾಗದಲ್ಲಿ ಫೈನಲ್‌ಗೆ ತಲುಪುವ ಮೊದಲು ಸರಿತಾ ಕ್ವಾರ್ಟರ್‌ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಅಸೆಮ್ ಸೆಡಾಮೆಟೊವಾರನ್ನು 10-0 ಅಂತರದಿಂದಲೂ, ಸೆಮಿಫೈನಲ್‌ನಲ್ಲಿ ವಿಯೆಟ್ನಾ ಹುಯೊಂಗ್ ಡಾವೊರನ್ನು 12-0 ಅಂತರದಿಂದ ಮಣಿಸಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದರು.
ಬಜರಂಗ್ ಅರ್ಹತಾ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಸಿರೊಜಿದ್ದಿನ್ ಹಸನೊವ್‌ರನ್ನು 4-3 ರಿಂದ ಮಣಿಸಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಇರಾನ್‌ನ ಮೆಸಾಮ್ ನಸಿರಿವರನ್ನು 7-5 ರಿಂದ ಸೋಲಿಸಿದ್ದರು. ಸೆಮಿ ಫೈನಲ್‌ನಲ್ಲಿ ಕುಕ್ವಾಂಗ್ ಕಿಮ್‌ರನ್ನು 3-2 ರಿಂದ ಸೋಲಿಸಿ ಫೈನಲ್ ಸುತ್ತಿಗೆ ತಲುಪಿದ್ದಾರೆ.
ಸಾಕ್ಷಿ ಮಲಿಕ್ ಪತಿ ಸತ್ಯವರ್ತ್ ಕಡಿಯಾನ್ ಪುರುಷರ 97 ಕೆಜಿ ವಿಭಾಗದಲ್ಲಿ ರಿಪಿಚೇಜ್ ಸುತ್ತಿನಲ್ಲಿ ಮಂಗೋಲಿಯದ ಬಟ್ಝುಲ್ ಉಲ್‌ಝಿಸೈಖಾನ್ ವಿರುದ್ಧ 5-8 ರಿಂದ ಸೋಲುವ ಮೂಲಕ ಕಂಚಿನ ಪದಕ ಸುತ್ತಿಗೇರುವ ಅವಕಾಶದಿಂದ ವಂಚಿತರಾದರು.
ಇದೇ ವೇಳೆ, ಒಲಿಂಪಿಯನ್ ಸಂದೀಪ್ ಥೋಮರ್ ಮಂಡಿನೋವಿನಿಂದಾಗಿ ಪುರುಷರ 57 ಕೆಜಿ ವಿಭಾಗದ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಥೋಮರ್ ಕಿರ್ಜಿಸ್ತಾನದ ಉಲುಕ್‌ಬೆಕ್ ವಿರುದ್ಧ 6-5 ಮುನ್ನಡೆಯಲ್ಲಿದ್ದಾಗ ಗಾಯಗೊಂಡಿದ್ದರು.







