ಪಂಜಾಬ್‌ಗೆ ಇಂದು ಮತ್ತೊಂದು ನಿರ್ಣಾಯಕ ಪಂದ್ಯ

ಪುಣೆ, ಮೇ 12: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರವಿವಾರ ಇಲ್ಲಿ ನಡೆಯಲಿರುವ ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಎದುರಿಸಲಿದೆ.
ಲೀಗ್ ಹಂತದ ಕೊನೆಯ ವಾರಾಂತ್ಯದಲ್ಲಿ ಕೇವಲ ಮುಂಬೈ ಇಂಡಿಯನ್ಸ್ ತಂಡ ಮಾತ್ರ ಪ್ಲೇ-ಆಫ್ ಸ್ಥಾನವನ್ನು ದೃಢಪಡಿಸಿಕೊಂಡಿದೆ. ಪುಣೆ ತಂಡ 13 ಪಂದ್ಯಗಳಲ್ಲಿ 16 ಅಂಕ ಗಳಿಸಿದ್ದು, -0.183 ರನ್‌ರೇಟ್ ಹೊಂದಿದೆ. 13 ಪಂದ್ಯಗಳನ್ನು ಆಡಿರುವ ಪಂಜಾಬ್ ತಂಡ 14 ಅಂಕ ಗಳಿಸಿದೆ. ಆದರೆ, +0.296 ರನ್‌ರೇಟ್ ಹೊಂದಿದೆ.
ರವಿವಾರದ ಪಂದ್ಯದಲ್ಲಿ ಪಂಜಾಬ್ ತಂಡ ಗೆಲುವು ಸಾಧಿಸಿದರೆ 16 ಅಂಕ ಗಳಿಸಲಿದೆ. ಉತ್ತಮ ರನ್‌ರೇಟ್ ಹಿನ್ನೆಲೆಯಲ್ಲಿ ಮುಂದಿನ ಸುತ್ತಿಗೇರುವ ಸಾಧ್ಯತೆಯಿದೆ. ಪುಣೆ ತಂಡ ಸೋಲನುಭವಿಸಿದರೆ ಮುಂದಿನ ಹಾದಿ ಕಠಿಣವಾಗಲಿದೆ. ಶನಿವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡ ಸೋಲುಂಡರೆ ಮಾತ್ರ ಪುಣೆ ತಂಡ ಪ್ಲೇ-ಆಫ್ ಅವಕಾಶ ತೆರೆದುಕೊಳ್ಳಲಿದೆ.
ಪುಣೆ ತಂಡ ಪಂಜಾಬ್‌ನಿಂದ ಕಠಿಣ ಸವಾಲು ಎದುರಿಸುತ್ತಿದೆ. ಮೇಲ್ನೋಟಕ್ಕೆ ಪುಣೆ ತಂಡ ಬಲಿಷ್ಠವಾಗಿದೆ. ನಾಯಕ ಸ್ಟೀವನ್ ಸ್ಮಿತ್(405 ರನ್), ಈ ವರ್ಷದ ದುಬಾರಿ ಆಟಗಾರ ಬೆನ್ ಸ್ಟೋಕ್ಸ್(316) ಹಾಗೂ ಭಾರತದ ಮಾಜಿ ನಾಯಕ ಎಂಎಸ್ ಧೋನಿ(240) ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಯುವ ಆಟಗಾರ ರಾಹುಲ್ ತ್ರಿಪಾಠಿ(360) ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಪಂಜಾಬ್ ತಂಡದ ಬೌಲಿಂಗ್ ದುರ್ಬಲವಾಗಿದೆ. ಭಾರತದ ಆಟಗಾರರಾದ ಸಂದೀಪ್ ಶರ್ಮ ಹಾಗೂ ಮೋಹಿತ್ ಶರ್ಮ ಡೆತ್ ಓವರ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ತಂಡದಲ್ಲಿ ಹಾಶಿಮ್ ಅಮ್ಲ ಹಾಗೂ ಡೇವಿಡ್ ಮಿಲ್ಲರ್ ಆಡುತ್ತಿಲ್ಲ. ಮಾರ್ಟಿನ್ ಗಪ್ಟಿಲ್ ಅವರು ಅಮ್ಲರಿಂದ ತೆರವಾದ ಸ್ಥಾನ ತುಂಬಲು ಎದುರು ನೋಡುತ್ತಿದ್ದಾರೆ. ಶಾನ್ ಮಾರ್ಷ್, ಮ್ಯಾಕ್ಸ್‌ವೆಲ್, ವೃದ್ಧಿಮಾನ್ ಸಹಾ, ಮನನ್ ವೋರಾ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ.
ಡೆಲ್ಲಿ-ಆರ್‌ಸಿಬಿ ನಡುವೆ ಕೊನೆಯ ಲೀಗ್ ಪಂದ್ಯ
ಹೊಸದಿಲ್ಲಿ, ಮೇ 13: ಹತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್ ಆಸೆಯನ್ನು ಕೈಬಿಟ್ಟಿರುವ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವಿವಾರ ಇಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕೇವಲ ಪ್ರತಿಷ್ಠೆಗಾಗಿ ಕಾದಾಡಲಿವೆ.
ಡೆಲ್ಲಿ-ಆರ್‌ಸಿಬಿ ಪಂದ್ಯದೊಂದಿಗೆ ಈ ವರ್ಷದ ಐಪಿಎಲ್‌ನ ಲೀಗ್ ಹಂತಕ್ಕೆ ತೆರೆ ಬೀಳಲಿದ್ದು, ಮೇ 16 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುವುದ.
ಅಸ್ಥಿರ ಪ್ರದರ್ಶನ ಉಭಯ ತಂಡಗಳಿಗೆ ಈ ಬಾರಿ ಮುಂದಿನ ಸುತ್ತಿಗೇರಲು ಮುಳುವಾಗಿ ಪರಿಣಮಿಸಿದೆ. ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡ ಪುಣೆ ವಿರುದ್ಧ 7 ರನ್‌ಗಳಿಂದ ಜಯ ಸಾಧಿಸಿತ್ತು. ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೋಲ್ಕತಾ ವಿರುದ್ಧ ಸೋಲುಂಡಿತ್ತು.
ಆರ್‌ಸಿಬಿ 13 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ, 10ರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಡೆಲ್ಲಿ ತಂಡ 6ರಲ್ಲಿ ಜಯ, 7ರಲ್ಲಿ ಸೋಲನುಭವಿಸಿ ಆರನೆ ಸ್ಥಾನದಲ್ಲಿದೆ. ಕಳೆದ ವರ್ಷದ ಐಪಿಎಲ್‌ನಲ್ಲಿ 973 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ವಿರಾಟ್ ಕೊಹ್ಲಿ ಈ ವರ್ಷ 250 ರನ್ ಗಳಿಸಲಷ್ಟೇ ಶಕ್ತವಾಗಿದ್ದಾರೆ. ಕೊಹ್ಲಿ ಭುಜನೋವಿನಿಂದಾಗಿ ಮೊದಲ ಮೂರು ಪಂದ್ಯಗಳಲ್ಲಿ ಆಡಿರಲಿಲ್ಲ.
ಗಾಯದಿಂದ ಚೇತರಿಸಿಕೊಂಡು ಬಂದರೂ ಬ್ಯಾಟಿಂಗ್‌ನಲ್ಲಿ ಮಿಂಚಲು ಸಫಲರಾಗಲಿಲ್ಲ. ಬಿಗ್ ಹಿಟ್ಟಿಂಗ್ ಓಪನರ್ ಕ್ರಿಸ್ ಗೇಲ್ ಹಾಗೂ ಎಬಿಡಿ ವಿಲಿಯರ್ಸ್ ಭಾರೀ ನಿರಾಸೆಗೊಳಿಸಿದರು. ಶೇನ್ ವ್ಯಾಟ್ಸನ್ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ವ್ಯಾಟ್ಸನ್ 2008ರಲ್ಲಿ ರಾಜಸ್ಥಾನ ತಂಡ ಐಪಿಎಲ್ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು.
ಮತ್ತೊಂದೆಡೆ ಡೆಲ್ಲಿ ತಂಡದಲ್ಲಿ ರಿಷಬ್ ಪಂತ್, ಸಂಜು ಸ್ಯಾಮ್ಸನ್ ಹಾಗೂ ಶ್ರೇಯಸ್ ಐಯ್ಯರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕನ್ನಡಿಗ ಕರುಣ್ ನಾಯರ್ ಕಳೆದ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಹಿರಿಯ ಆಟಗಾರ ಝಹೀರ್‌ಖಾನ್ ಪುಣೆ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.







