ವಿಜಯ ಬ್ಯಾಂಕ್‌ನ ಲಾಂಛನ, ಘೋಷವಾಕ್ಯ ಬದಲಾಯಿಸದಿರಲು ಮನವಿ
ಮಂಗಳೂರು, ಮೇ 13: ವಿಜಯ ಬ್ಯಾಂಕ್‌ನ ಪ್ರಸಕ್ತ ಲಾಂಛನ ಹಾಗೂ ಘೋಷ ವಾಕ್ಯವನ್ನು ಬದಲಾಯಿಸುವ ಪ್ರಸ್ತಾಪವನ್ನು ಆಡಳಿತ ಮಂಡಳಿ ಕೈಬಿಡಬೇಕು ಎಂದು ವಿಜಯ ಬ್ಯಾಂಕ್ ನಿವೃತ್ತರ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಎ.ಬಿ.ಶೆಟ್ಟಿ, ಬ್ಯಾಂಕ್‌ನ ಲಾಂಛನ ಹಾಗೂ ಘೋಷ ವಾಕ್ಯ ದೇಶದಲ್ಲೇ ಅತ್ಯಂತ ಆಕರ್ಷಕ ಹಾಗೂ ಜನಪ್ರಿಯವಾಗಿದೆ. ಅದನ್ನು ಬದಲಿಸುವ ಅಗತ್ಯ ಕಂಡುಬರುವುದಿಲ್ಲ. ಬದಲಿಸುವುದರಿಂದ ಬ್ಯಾಂಕ್‌ಗೆ ಯಾವುದೇ ರೀತಿಯಲ್ಲಿ ಪ್ರಯೋಜನವೂ ಆಗದು. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಗರಿಷ್ಠ 750 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಇದೀಗ ಲಾಂಛನ ಹಾಗೂ ಘೋಷ ವಾಕ್ಯವನ್ನು ಬ್ಯಾಂಕ್‌ನ ಸುಮಾರು 4,000ಕ್ಕೂ ಅಧಿಕ ಕಚೇರಿಗಳಲ್ಲಿ, ಎಟಿಎಂ, ಚೆಕ್ ಪುಸ್ತಕ, ಸ್ಟೇಷನರಿ ಮೊದಲಾದವುಗಳಿಂದ ಬದಲಿಸಲು ಸಾವಿರಾರು ಕೋ.ರೂ. ವೆಚ್ಚವಾಗಲಿದೆ. ಇದಕ್ಕಾಗಿ ಲಾಭದ ಹಣವನ್ನು ಖರ್ಚು ಮಾಡುವ ಬದಲು ಆ ಹಣವನ್ನು ಗ್ರಾಹಕರು ಹಾಗೂ ಸಿಬಂ್ಬದಿಯ ಶ್ರೇಯೋಭಿವೃದ್ಧಿಗಾಗಿ ಕಾರ್ಯಕ್ರಮಗಳಿಗೆ ವಿನಿಯೋಗಿಸುವುದು ಒಳಿತು. ಈ ಬಗ್ಗೆ ಸಂಘವು ಆಡಳಿತ ಮಂಡಳಿ ಹಾಗೂ ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ವಿಶ್ವನಾಥ ನಾಯಕ್, ಕೆ.ಸಿ. ಹೆಗ್ಡೆ, ಕಿಶನ್ ಮಾಡ, ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.





