‘ಅಲ್ಪಸಂಖ್ಯಾತರ ಯೋಜನೆ’ಗಳ ಬಗ್ಗೆ ನಾಳೆ ಮಾಹಿತಿ ಶಿಬಿರ
ಮಂಗಳೂರು, ಮೇ 13: ಮಂಗಳೂರು ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಮೇ 15ರಂದು ‘ಅಲ್ಪಸಂಖ್ಯಾತರ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ’ ಎಂಬ ಶೀರ್ಷಿಕೆಯಡಿ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಅಸೋಸಿಯೇಶನ್‌ನ ಕಾರ್ಯ ದರ್ಶಿ ಮೆಹಫಸೂಲ್ ರಹ್ಮಾನ್ ಮಾಹಿತಿ ನೀಡಿದರು. ಕರ್ನಾಟಕ ಅಲ್ಪಸಂಖ್ಯಾತ ಇಲಾಖೆಯಿಂದ ಲಭ್ಯವಿರುವ ಯೋಜನೆ ಗಳ ಕುರಿತಂತೆ ಮಾಹಿತಿ ನೀಡುವ ಮೂಲಕ ಯೋಜನೆಗಳ ಲಾಭವನ್ನು ಅರ್ಹರು ಪಡೆಯುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೋಳಾರದ ಶಾದಿ ಮಹಲ್‌ನಲ್ಲಿ ಅಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 1ರವರೆಗೆ ಈ ಶಿಬಿರ ನಡೆಯಲಿದೆ. ಅಧ್ಯಕ್ಷತೆಯನ್ನು ಅಸೋಸಿಯೇಶನ್‌ನ ಅಧ್ಯಕ್ಷ ಹಾಜಿ ಯೂಸುಫ್ ಖಾದರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವರಾದ ತನ್ವೀರ್ ಸೇಠ್, ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಐವನ್ ಡಿಸೋಜ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಯೂಸುಫ್ ಖಾದರ್, ಉಪ ಕಾರ್ಯ ದರ್ಶಿ ಮಕ್ಬೂಲ್ ಅಹ್ಮದ್, ಕೋಶಾಧಿಕಾರಿ ಝಹೀರ್ ಹುಸೈನ್ ಸದಸ್ಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.





