ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆಂದು ಹೇಳಿಲ್ಲ: ವಿಶ್ವನಾಥ್ ಸ್ಪಷ್ಟನೆ

ಮಡಿಕೇರಿ, ಮೇ 13 : ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಲಿರುವುದಾಗಿ ಬೇರೆಯವರು ಸುದ್ದಿ ಹರಡಿಸಿದ್ದಾರೆಯೇ ಹೊರತು ತಾನೆಂದೂ ಅದನ್ನು ಹೇಳಿಲ್ಲ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಮತ್ತು ತಮ್ಮ ಭೇಟಿ ಸೌಹಾರ್ದಯುತವಾದ ಭೇಟಿಯೇ ಹೊರತು ಅದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಎರಡು ವರ್ಷಗಳಲ್ಲಿ ಹಿರಿಯ ಕಾಂಗ್ರೆಸ್ಸಿಗರ ಸಲಹೆಗಳನ್ನು ಪಡೆದೇ ಮುಂದುವರಿಯುತ್ತಿದ್ದರು. ಆದರೆ ಆ ನಂತರದಲ್ಲಿ ಅವರು ಬದಲಾಗಿದ್ದಾರೆ. ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿಯಾದ ಬಳಿಕ ನಮ್ಮ ಅಗತ್ಯವಾದರೂ ಅವರಿಗೆ ಏನಿದೆ ಎಂದು ಪ್ರಶ್ನೆಯೊಂದಕ್ಕೆ ವಿಶ್ವನಾಥ್ ಅವರು ವ್ಯಂಗವಾಡಿದರು.
ತಾನು ಇಂದು ಅಧಿಕಾರದಲ್ಲಿಲ್ಲದಿದ್ದರೂ, ಜನರು ಹಾಗೂ ಮಾಧ್ಯಮದವರು ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನನ್ನನ್ನು ಇಷ್ಟು ವರ್ಷಗಳ ಕಾಲ ರಾಜಕೀಯವಾಗಿ ಬೆಳೆಸಿದವರ ಸಲಹೆಗಳನ್ನು ಪಡೆದೇ ತೀರ್ಮಾನ ತೆಗೆದುಕೊಳ್ಳಲಿದ್ದೇನೆ. ಅದರಲ್ಲಿ ಮುಚ್ಚಿಡುವುದೇನಿಲ್ಲ ಎಂದು ಅವರು ತಿಳಿಸಿದರು.
ರಾಜ್ಯದ ಉಸ್ತುವಾರಿಯನ್ನು ವೇಣುಗೋಪಾಲ್ ಅವರಿಗೆ ಎಐಸಿಸಿ ನೀಡಿದೆ. ಅವರೊಬ್ಬ ಉತ್ತಮವಾದ ರಾಜಕಾರಣಿ, ರಾಜ್ಯದಲ್ಲಿ ಪಕ್ಷದಲ್ಲಿರುವ ಕೆಲವು ಗೊಂದಲಗಳನ್ನು ಅವರು ಸಮರ್ಥವಾಗಿ ಪರಿಹರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ ವಿಶ್ವನಾಥ್ ಅವರು, ಹಿಂದೆ ಕೇಂದ್ರದಲ್ಲೂ ನಮ್ಮ ಸರಕಾರವಿತ್ತು. ಆಗ ಹೈಕಮಾಂಡ್ ಬಿಗುವಾಗಿ ನಡೆದುಕೊಳ್ಳುತ್ತಿತ್ತು. ಆದರೆ ಇಂದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಹಾಗಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರು ಕೆಲವೊಮ್ಮೆ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.





