ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಶೋಧನ್-2017
ತಂತ್ರಜ್ಞಾನಾಧಾರಿತ ಪ್ರಾಜೆಕ್ಟ್‌ಗಳ ಪ್ರದರ್ಶನ

ಮಂಗಳೂರು, ಮೇ 13: ಕೆಂಜಾರಿನಲ್ಲಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸಂಶೋಧಿಸಿ ತಯಾರಿಸಿದ ತಂತ್ರಜ್ಞಾನ ಆಧರಿತ ಪ್ರಾಜೆಕ್ಟ್‌ಗಳ ಪ್ರದರ್ಶನ ‘ಸಂಶೋಧನ್ -2017’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಂಸಿಎಫ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಎಸ್.ಸೋಮಶೇಖರನ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಜೀವನದಲ್ಲಿ ನಿರ್ದಿಷ್ಟ ಗುುರಿಯನ್ನಿಟ್ಟುಕೊಂಡು ವಿವಿಧ ವಿಷಯಗಳ ಬಗ್ಗೆ ಸಂಶೋಧನೆ ನಡೆಸಬೇಕು. ಆ ಮೂಲಕ ಜ್ಞಾನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ದಿಲೀಪ್ ಕುಮಾರ್ ಕೆ. ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರರ್ದಶಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸುವಲ್ಲಿ ಮಹಾವಿದ್ಯಾಲಯವು ಪ್ರಮುಖ ಪಾತ್ರವನ್ನು ವಹಿಸಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಿದೆ ಎಂದರು.
ಪ್ರದರ್ಶನದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 183 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗಿತ್ತು. ಪ್ರತೀ ವಿಭಾಗಗಳಲ್ಲಿ ಅತ್ಯುತ್ತಮ ಮತ್ತು ಉತ್ತಮ ಪ್ರಾಜೆಕ್ಟ್ ಎಂದು ಆಯ್ಕೆಯಾದ ವಿಜೇತರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಸಂಯೋಜಕ ಉಪನ್ಯಾಸಕ ಹರ್ಷ ಜಿ.ಒ. ಮೊದಲಾದವರು ಉಪಸ್ಥಿತರಿದ್ದರು.





