ಅಸೆಂಬ್ಲಿ ನಡೆಯುತ್ತಿದ್ದ ವೇಳೆ ಬ್ಯಾಗ್ ಹಾಕಿದ್ದಕ್ಕೆ ಥಳಿಸಿದ ಪ್ರಾಂಶುಪಾಲ: ಕಣ್ಣಿನ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ

ಅಲಹಾಬಾದ್, ಮೇ 14: ಶಾಲೆಯಲ್ಲಿ ಬೆಳಗ್ಗಿನ ಅಸೆಂಬ್ಲಿ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಶಾಲಾ ಬ್ಯಾಗ್ ಹಾಕಿಕೊಂಡು ನಿಂತಿದ್ದರಿಂದ ಕೋಪಗೊಂಡ ಪ್ರಾಂಶುಪಾಲ ಹೊಡೆದಿದ್ದು, ಪರಿಣಾಮ ವಿದ್ಯಾರ್ಥಿ ತನ್ನ ಬಲಗಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಅಲಹಾಬಾದ್ ನಲ್ಲಿ ನಡೆದಿದೆ.
ಮೇ 9ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಸರ್ವನ್ ಟೆರೆನ್ಸ್ ಬ್ಯಾಗ್ ನೊಂದಿಗೆ ಅಸೆಂಬ್ಲಿಗೆ ಹಾಜರಾಗಿದ್ದ. ಇದರಿಂದ ಕೋಪಗೊಂಡ ಪ್ರಾಂಶುಪಾಲ ಲೆಸ್ಲಿ ಕೊಟಿನೊ ವಿದ್ಯಾರ್ಥಿ ನಿಂತಿದ್ದಲ್ಲಿಗೆ ಬಂದು ಬೆತ್ತದಿಂದ ಹೊಡೆಯಲು ಆರಂಭಿಸಿದ್ದಾರೆ. ಇದೇ ಸಂದರ್ಭ ಬೆತ್ತ ಬಲಗಣ್ಣಿಗೆ ತಾಗಿ ರಕ್ತಸ್ರಾವವಾಗಲು ಆರಂಭಿಸಿದೆ. ತಕ್ಷಣವೇ ವಿದ್ಯಾರ್ಥಿಯನ್ನು ಅಲಹಾಬಾದ್ ನ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಲಕ್ನೋದ ಆಸ್ಪತ್ರೆಗೆ ಸಾಗಿಸಲಾಯಿತು.
ಸರ್ವನ್ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
Next Story