ಚೆನ್ನೈನ ತಾಯಂದಿರು ಹಾಲೂಡಿಸುತ್ತಿರುವದು ಯಾರಿಗೆ ಗೊತ್ತೇ?
ವಹೀದಾ ಸತೀಶಕುಮಾರ (ಎಡ) ಮತ್ತು ಶರಣ್ಯಾ ಗೋವಿಂದರಾಜುಲು
ಚೆನ್ನೈ,ಮೇ 14: ಇಂದು ವಿಶ್ವ ತಾಯಂದಿರ ದಿನ. ತಾಯ್ತನವೇ ಒಂದು ಸಂಭ್ರಮ. ಆದರೆ ಕೆಲವು ತಾಯಂದಿರಿರುತ್ತಾರೆ. ನವಮಾಸಗಳು ತುಂಬುವ ಮುನ್ನವೇ ಮಗು ಈ ಭೂಮಿಗೆ ಇಳಿದಿರುತ್ತದೆ. ಇಂತಹ ಶಿಶುಗಳಿಗೆ ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ವಿಭಾಗದಲ್ಲಿ ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕಾಗುತ್ತದೆ. ಅವಧಿಗೆ ಮುನ್ನ ಮಗುವಿಗೆ ಜನ್ಮ ನೀಡಿರುವುದರಿಂದ ಹೆಚ್ಚಿನ ತಾಯಂದಿರಿಗೆ ಎದೆಹಾಲಿನ ಕೊರತೆಯಿರುತ್ತದೆ. ಆದರೆ ನವಜಾತ ಶಿಶುಗಳಿಗೆ ತಾಯಿಯ ಹಾಲೇ ಅಮೃತ. ಅವು ಆರೋಗ್ಯವಂತವಾಗಗಿ ಬೆಳೆಯಲು ತಾಯಿಯ ಹಾಲಿಗೆ ಸಮನಾದ ಪರ್ಯಾಯ ಬೇರೆಇಯಿಲ್ಲ. ಆದರೆ ತಾಯಿ ಎದೆಹಾಲಿನಿಂದ ವಂಚಿತವಾಗಿದ್ದರೆ..? ದೇವರು ನಿಷ್ಕರುಣಿಯಲ್ಲ. ಚೆನ್ನೈನಲ್ಲಿಯ ತಾಯಂದಿರು ತಮಗೆ ಗೊತ್ತೇ ಇಲ್ಲದ,ಈ ಅಪರಿಚಿತ ಶಿಶುಗಳಿಗೆ ಹಾಲೂಡಿಸುತ್ತಿದ್ದಾರೆ.
ಕಳೆ ಕೆಲವು ತಿಂಗಳುಗಳಿಂದ ಶರಣ್ಯಾ ಗೋವಿಂದರಾಜುಲು (32) ಜೀವಗಳನ್ನು ಉಳಿಸುವಲ್ಲಿ ನೆರವಾಗುತ್ತಿದ್ದಾರೆ.....ನವತಾಯಿಯೋರ್ವಳು ಮಾಡಬಹುದಾದ ರೀತಿಯಲ್ಲಿ. ಹೌದು,ಆಕೆ ತನ್ನ ಎದೆಹಾಲನ್ನು ದಾನ ಮಾಡುತ್ತಿದ್ದಾರೆ..ಏಳು ತಿಂಗಳ ಮಗುವಿನ ತಾಯಿಯಾಗಿರುವ ಶರಣ್ಯಾ ವಾರಕ್ಕೆ ಐದು ದಿನ 100-150 ಮಿ.ಲೀ.ಹಾಲನ್ನು ಸ್ಥಳೀಯ ನವಜಾತ ಶಿಶುಗಳ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ ಮತ್ತು ಈ ಹಾಲು ಪೋಷಣೆಯ ಅಗತ್ಯವಿರುವ ಅವಧಿ ಪೂರ್ವ ಜನಿಸಿದ ಹಲವಾರು ಶಿಶುಗಳ ಪೈಕಿ ಒಂದರ ಹೊಟ್ಟೆಯನ್ನು ತುಂಬಿಸುತ್ತದೆ.
ನನ್ನ ಗಂಡ ರಕ್ತದಾನಿಯಾಗಿದ್ದಾರೆ,ನಾನು ಎದೆಹಾಲು ದಾನಿಯಾಗಿದ್ದೇನೆ ಎನ್ನುವ ಶರಣ್ಯಾ, ದಿನದ ಕೊನೆಯಲ್ಲಿ ನಾವು ಇನ್ನೊಂದು ಮಾನವ ಜೀವಿಗೆ ನೆರವಾಗುತ್ತೇವೆ. ಅವಧಿಗೆ ಮುನ್ನ ಜನಿಸಿರುವ ಕೆಲವು ಶಿಶುಗಳು ನನ್ನ ಅಂಗೈನಷ್ಟೂ ದೊಡ್ಡವಿಲ್ಲ. ನಾನು ಅವುಗಳಿಗೆ ಯಾವದೋ ರೀತಿಯಲ್ಲಿ ನೆರವಾಗುತ್ತಿದ್ದೇನೆ ಎನ್ನುವುದೇ ಖುಷಿಯನ್ನು ನೀಡುತ್ತಿದೆ ಎಂದರು. ಶರಣ್ಯಾ ಕೆಲವೊಮ್ಮೆ ಆಸ್ಪತ್ರೆಗೆ ತೆರಳಿ ತನ್ನ ಎದೆಹಾಲು ಕುಡಿದು ಬೆಳೆಯುತ್ತಿರುವ ಶಿಶುಗಳನ್ನು ಮತ್ತು ಅವುಗಳ ತಾಯಂದಿರನ್ನು ಭೇಟಿಯಾಗುವುದೂ ಇದೆ.
ಎದೆಹಾಲು ದಾನವನ್ನು ಸಮನ್ವಯಗೊಳಿಸುತ್ತಿರುವ ನ್ಯಾಚುರಲ್ ಪೇರೆಂಟಿಂಗ್ ಕಮ್ಯುನಿಟಿ ನೆಟ್ವರ್ಕ್ನ ಇಂತಹ ಹಲವಾರು ತಾಯಂದಿರಲ್ಲಿ ಶರಣ್ಯಾ ಓರ್ವರಾಗಿದ್ದಾರೆ. ಕೆಲವೊಮ್ಮೆ ಎದೆಹಾಲಿಗಾಗಿ ಆಸ್ಪತ್ರೆಗಳೇ ನಮ್ಮನ್ನು ಸಂಪರ್ಕಿಸುತ್ತವೆ. ಈ ಹಾಲನ್ನು ಸಂಗ್ರಹಿಸಿಡಬಹುದಾದ್ದರಿಂದ ಕೆಲವೊಮ್ಮೆ ನಾವೇ ನಿಯಮಿತವಾಗಿ ದಾನ ಮಾಡುತ್ತೇವೆ ಎನ್ನುತ್ತಾರೆ ಇನ್ನೋರ್ವ ದಾನಿ ವಹೀದಾ ಸತೀಶಕುಮಾರ್.
ಸದ್ಯ ರಾಜ್ಯದಲ್ಲಿ ಒಂಭತ್ತು ಸರಕಾರಿ ಎದೆಹಾಲು ಬ್ಯಾಂಕ್ಗಳಿದ್ದು, ಈ ವರ್ಷ ಇನ್ನೂ ನಾಲ್ಕು ಬ್ಯಾಂಂಕುಗಳನ್ನು ಆರಂಭಿಸುವ ಉದ್ದೇಶವಿದೆ. ಕೆಲವು ಖಾಸಗಿ ಎದೆಹಾಲು ಬ್ಯಾಂಕುಗಳೂ ಇವೆ. ಅವಧಿಪೂರ್ವ ಜನಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇಂತಹ ಬ್ಯಾಂಕ್ಗಳ ಸಂಖ್ಯೆ ಹೆಚ್ಚುವ ಅಗತ್ಯವಿದೆ ಎನ್ನುತ್ತಾರೆ ನವಜಾತ ಶಿಶುಗಳ ತಜ್ಞೆ ಡಾ.ಕೆ.ಕುಮುದಾ.