ಯುದ್ಧ ಟ್ಯಾಂಕ್‌ನ 60 ಟನ್ ಭಾರವನ್ನು ತಾಳಬಲ್ಲ ದೇಶದ ಅತ್ಯಂತ ಉದ್ದದ ಸೇತುವೆ
ಮೇ 26ರಂದು ಪ್ರಧಾನಿಯಿಂದ ಉದ್ಘಾಟನೆ
.jpg)
ದಿಸ್ಪುರ್,ಮೇ 14: 60 ಟನ್‌ಗಳ ಯುದ್ಧ ಟ್ಯಾಂಕ್‌ನ ಭಾರವನ್ನು ತಡೆದುಕೊಳ್ಳಬಲ್ಲ ಭಾರತದ ಅತ್ಯಂತ ಉದ್ದದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮೇ.26ರಂದು ಉದ್ಘಾಟಿಸಲಿದ್ದಾರೆ. ಅಸ್ಸಾಮಿನಲ್ಲಿ ಬ್ರಹಪುತ್ರಾ ನದಿಯ ಮೇಲೆ ನಿರ್ಮಿಸಲಾಗಿರುವ 9.15 ಕಿ.ಮೀ.ಉದ್ದದ ಧೋಲಾ-ಸಾದಿಯಾ ಸೇತುವೆಯ ಉದ್ಘಾಟನೆಯೊಂದಿಗೆ ಮೋದಿಯವರು ಎನ್‌ಡಿಎ ಸರಕಾರವು ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಸಡಗರಕ್ಕೆ ಚಾಲನೆ ನೀಡಲಿದ್ದಾರೆ. ಈ ಸೇತುವೆ ಮುಂಬೈನ ಬಾಂದ್ರಾ-ವರ್ಲಿ ಸೀಲಿಂಕ್‌ಗಿಂತ 3.55 ಕಿ.ಮೀ.ಹೆಚ್ಚು ಉದ್ದವಾ ಗಿದೆ.
ಈ ಸೇತುವೆ ನಿರ್ಮಾಣವು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಜನತೆಗೆ ವಾಯು ಮತ್ತು ರೈಲು ಸಂಪರ್ಕವನ್ನು ಸುಲಭವಾಗಿಸುವ ಜೊತೆಗೆ ಭಾರತ-ಚೀನಾ ಗಡಿಯಲ್ಲಿ...ವಿಶೇಷವಾಗಿ ಈಶಾನ್ಯ ಭಾರತದಲ್ಲಿ ತನ್ನ ರಕ್ಷಣಾ ಅಗತ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನವಾಗಿದೆ ಎಂದು ಪರಿಗಣಿಸಲಾಗಿದೆ.
ಈ ಸೇತುವೆಯು ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ಜನರಿಂದ ಮತ್ತು ಸೇನೆಯಿಂದ ಬಳಕೆಯಾಗುವುದರಿಂದ ಈಶಾನ್ಯ ಭಾರತದಲ್ಲಿ ರಸ್ತೆ ಸಂಪರ್ಕ ಸೌಲಭ್ಯವನ್ನು ಹೆಚ್ಚಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ರವಿವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
950 ಕೋ.ರೂ.ಗಳ ಯೋಜನಾವೆಚ್ಚದ ಸೇತುವೆಯ ನಿರ್ಮಾಣ 2011ರಲ್ಲಿ ಆರಂಭಗೊಂಡಿತ್ತು. ಮಿಲಿಟರಿ ಟ್ಯಾಂಕ್‌ಗಳ ಓಡಾಟವನ್ನೂ ತಾಳಿಕೊಳ್ಳುವಂತೆ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ.
ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ದೇಶದಲ್ಲಿ ಪ್ರಮುಖ ಆಯಕಟ್ಟಿನ ಸ್ಥಳಗಳಾಗಿವೆ, ಸೇತುವೆಯು ಚೀನಾದ ಗಡಿಗೆ ಹತ್ತಿರವಿರುವುದರಿಂದ ಸಂಘರ್ಷದ ಸಮಯಗಳಲ್ಲಿ ಸೇನೆಯ ತ್ವರಿತ ಚಲನವಲನಗಳಿಗೆ ನೆರವಾಗಲಿದೆ ಎಂದು ಸೋನೊವಾಲ್ ತಿಳಿಸಿದರು.
ಸೇತುವೆಯು ಅಸ್ಸಾಂ ರಾಜಧಾನಿ ದಿಸ್ಪುರ್‌ನಿಂದ 540 ಕಿ.ಮೀ.ಮತ್ತು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ 300 ಕಿ.ಮೀ.ದೂರದಲ್ಲಿದೆ ಮತ್ತು ಚೀನಿ ಗಡಿಯಿಂದ 100 ಕಿ.ಮೀ.ಗೂ ಕಡಿಮೆ ವೈಮಾನಿಕ ಅಂತರದಲ್ಲಿದೆ.
ತೇಜಪುರ ಸಮೀಪದ ಕಾಲಿಯಾಭೊಮೋರಾ ಸೇತುವೆಯ ಬಳಿಕ ಈಗ ಸೇತುವೆ ನಿರ್ಮಾಣಗೊಂಡಿರುವ ಧೋಲಾವರೆಗಿನ 375 ಕಿ.ಮೀ.ಅಂತರದಲ್ಲಿ ಬ್ರಹ್ಮಪುತ್ರಾ ನದಿಗೆ ಬೇರೆ ಸೇತುವೆಯಿಲ್ಲ. ಹಾಲಿ ನದಿಯ ಎರಡೂ ದಂಡೆಗಳ ನಡುವೆ ಎಲ್ಲ ಸಾರಿಗೆಯು ಜಲಮಾರ್ಗದ ಮೂಲಕವೇ ನಡೆಯುತ್ತಿದೆ.
ನೂತನ ಸೇತುವೆಯಿಂದಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ನಡುವಿನ ಪ್ರಯಾಣ ಅವಧಿ ನಾಲ್ಕು ಗಂಟೆಗಳಷ್ಟು ಕಡಿಮೆಯಾಗಲಿದೆ.







