ಕಠಿನ ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯ: ಜೋಬಿ ಜೋಸೆಫ್ ಮುಂಡಮಟ್ಟಂ

ಪುತ್ತೂರು, ಮೇ 14: ಕಠಿನ ಪರಿಶ್ರಮ, ನಿರಂತರ ಫಿಟ್‌ನೆಟ್ ಕಾಯ್ದುಕೊಳ್ಳುವುದರಿಂದ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಭಾರತೀಯ ವಾಲಿಬಾಲ್ ತಂಡದ ಮಾಜಿ ಕಪ್ತಾನ ಜೋಬಿ ಜೋಸೆಫ್ ಮುಂಡಮಟ್ಟಂ ಹೇಳಿದರು.
ಅವರು ಯುವ ಸಬಲೀಕರಣ ಕ್ರೀಡಾ ಇಲಾಖೆ, ಮಿತ್ರ ವೃಂದ ವಾಲಿಬಾಲ್ ಆಕಾಡಮಿ ಚಾರಿಟೇಬಲ್ ಟ್ರಸ್ಟ್, ಮುಳಿಯ ಜ್ಯುವೆಲ್ಲರ್ಸ್ ಪುತ್ತೂರು ಇದರ ಆಶ್ರಯದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಆವರಣದಲ್ಲಿ ಶನಿವಾರ ನಡೆದ ಉಚಿತ ವಾಲಿಬಾಲ್ ಬೇಸಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಬಿರದಿಂದ ಸಾಕಷ್ಟು ಕಲಿತಿರಬಹುದು. ಆದರೆ ಅದನ್ನು ಮರೆಯದೆ ಬಳಸಿಕೊಳ್ಳಬೇಕು. ಶಿಬಿರದ ಸದುಪಯೋಗ ಪಡೆದು ಅತ್ಯುತ್ತಮ ವಾಲಿಬಾಲ್ ಪಟುಗಳಾಗಿ ರೂಪುಗೊಳ್ಳಿ ಎಂದು ಅವರು ಶು ಹಾರೈಸಿದರು.
ಯುವ ಸಬಲೀಕರಣ ಕ್ರೀಡಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಜಿಲ್ಲೆಯಲ್ಲಿ ಎನ್‌ಐಎಸ್ ತರಬೇತುದಾರರು ಬೆರಳೆಣಿಕೆ ಸಂಖ್ಯೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಎನ್‌ಐಎಸ್ ತರಬೇತುದಾರ ಪಿ.ವಿ.ನಾರಾಯಣನ್ ಅವರಿಂದ ತರಬೇತಿ ಪಡೆಯುವ ಅವಕಾಶ ಸಿಕ್ಕಿರುವುದು ಶಿಬಿರಾರ್ಥಿಗಳ ಸೌಭಾಗ್ಯ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ವಾಲಿಬಾಲ್ ಎಸೋಶಿಯಶನ್ ಕಾರ್ಯದರ್ಶಿ ಜಯಪ್ರಕಾಶ್ ರೈ ಮಾತನಾಡಿ, ಒಗ್ಗಟ್ಟಿನ ಮೂಲಕ ಸೌಹಾರ್ದತೆಯ ಸಂದೇಶವನ್ನು ನಾಡಿಗೆ ಪಸರಿಸುವ ಕ್ರೀಡೆ ಅತ್ಯಂತ ಮಹತ್ವದ್ದು. ತರಬೇತಿಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ತೋರುವಂತಾಗಲಿ ಎಂದು ಶು ಹಾರೈಸಿದರು.
ನಗರಸಭೆ ಅಧ್ಯಕ್ಷ ಜಯಂತಿ ಬಲ್ನಾಡು ಸಭಾಧ್ಯಕ್ಷತೆ ವಹಿಸಿದ್ದರು. ಮುಳಿಯ ಜ್ಯುವೆಲ್ಲರ್ಸ್ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್, ಸುಳ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸಂಶುದ್ದಿನ್, ದರ್ಬೆ ಲಿಟ್ಲ ಫ್ಲವರ್ ಶಾಲೆಯ ಮುಖ್ಯ ಗುರು ಲಿಲ್ಲಿ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ, ಹಿರಿಯ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜ, ಎನ್‌ಐಎಸ್ ವಾಲಿಬಾಲ್ ತರಬೇತುದಾರ ನಾರಾಯಣನ್ ಪಿ.ವಿ, ಜಯರಾಜ್ ಎಲಿಕ, ಮಿತ್ರ ವೃಂದ ವಾಲಿಬಾಲ್ ಅಕಾಡಮಿ ಅಧ್ಯಕ್ಷ ಕೃಷ್ಣನ್ ಪಿ.ವಿ ಮೊದಲಾದವರು ಉಪಸ್ಥಿತರಿದ್ದರು.
ಪವಿತ್ರಾ ಮತ್ತು ಆಜ್ಞಾ ಪ್ರಾರ್ಥಿಸಿದರು. ಮಿತೃವೃಂದ ವಾಲಿಬಾಲ್ ಅಕಾಡಮಿ ಕಾರ್ಯದರ್ಶಿ ಬಾಲಚಂದ್ರ ಕೆ ಸ್ವಾಗತಿಸಿ, ಅಕಾಡಮಿ ಸದಸ್ಯ ಪ್ರಸನ್ನ ಕುಮಾರ್ ವಂದಿಸಿದರು. ಶಿಕ್ಷಕಿ ವೇದಾವತಿ ಮುಕ್ವೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ನಿರೂಪಿಸಿದರು.
ಈ ಸಂದರ್ಭ ಭಾರತೀಯ ತಂಡದ ಮಾಜಿ ಕಪ್ತಾನ ಜೋಬಿ ಜೋಸೆಫ್ ಹಾಗೂ ಎನ್‌ಐಎಸ್ ವಾಲಿಬಾಲ್ ತರಬೇತುದಾರ ನಾರಾಯಣನ್ ಪಿ.ವಿ ಅವರನ್ನು ಸಮ್ಮಾನಿಸಲಾಯಿತು.







