ವೃತ್ತಿಪರ, ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
"ಜೆ.ಎಸ್.ಎಸ್. ಸಂಸ್ಥೆಯಿಂದ ದುಬೈನಲ್ಲಿ ಕನ್ನಡ ಶಾಲೆ"

ಚಾಮರಾಜನಗರ. ಮೇ.14: ಮುಂದಿನ ಶೈಕ್ಷಣಿಕ ಸಾಲಿನಲ್ಲಿ ವೃತ್ತಿಪರ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಪದವಿ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಸುಮಾರು ಒಂದೂವರೆ ಲಕ್ಷ ಲ್ಯಾಪ್ ಟಾಪ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳ ಬಳಿ ನಿರ್ಮಾಣ ಮಾಡಿರುವ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಜೆ.ಎಸ್.ಎಸ್. ಸಂಸ್ಥೆಯು ಚಾಮರಾಜನಗರದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಿದೆ. ಹೊರದೇಶದ ಕನ್ನಡಿಗರ ಮಕ್ಕಳು ಕನ್ನಡ ಭಾಷೆಯನ್ನು ಕಲಿಯುವುದಕ್ಕಾಗಿ ವಿದೇಶಗಳಲ್ಲೂ ಕನ್ನಡ ಶಾಲೆಯನ್ನು ತೆರೆಯುವಂತೆ ಅಲ್ಲಿನ ಸಂಸ್ಥೆಗಳಿಗೆ ತಿಳಿಸಿದ್ದೆ. ಅದರಂತೆ ದುಬೈನಲ್ಲಿ ಕನ್ನಡ ಶಾಲೆ ತೆರೆಯಲು ಜೆ.ಎಸ್.ಎಸ್. ಸಂಸ್ಥೆ ಮುಂದೆ ಬಂದಿದೆ ಎಂದರು.
ಸುತ್ತೂರು ಮಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಚಳವಳಿಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್, ಖಾಸಗಿ ನರ್ಸಿಂಗ್ ಹೋಂ ಗಳು ಸೇವೆ ಮಾಡುವ ಬದಲು ವ್ಯಾಪಾರೀಕರಣಕ್ಕೆ ಮುಂದಾಗಿದೆ. ಸರಕಾರ ಖಾಸಗಿ ನರ್ಸಿಂಗ್ ಹೋಂಗಳ ಬಗ್ಗೆ ನಿಯಂತ್ರಣಕ್ಕೆ ಮುಂದಾಗಬೇಕು ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸಚಿವ ಬಸವರಾಯರೆಡ್ಡಿ, ಆಹಾರ ಸಚಿವ ಯು ಟಿ ಖಾದರ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಲೋಕಸಭಾ ಸದಸ್ಯ ಆರ್. ದೃವನಾರಾಯಣ್, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಜಯಣ್ಣ, ಎಂ.ಸಿ. ಮೋಹನಕುಮಾರಿ, ಮಾಜಿ ಶಾಸಕ ವಾಟಾಳ್ ನಾಗರಾಜ್ ಶಾಸಕ ಧರ್ಮಸೇನಾ, ಶ್ರೀಕಂಠೇಗೌಡ, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.







