ಮ.ಪ್ರದೇಶ: ಪರೀಕ್ಷಾ ಫಲಿತಾಂಶಗಳ ಬಳಿಕ 12 ವಿದ್ಯಾರ್ಥಿಗಳ ಆತ್ಮಹತ್ಯೆ

ಭೋಪಾಲ,ಮೇ 14: ಮಧ್ಯಪ್ರದೇಶ ಪ್ರೌಢಶಿಕ್ಷಣ ಮಂಡಳಿಯು ನಡೆಸಿದ್ದ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳ ಫಲಿತಾಂಶಗಳು ಶನಿವಾರ ಪ್ರಕಟಗೊಂಡಿದ್ದು, ಅಂದು ತಡರಾತ್ರಿಯವರೆಗೆ ರಾಜ್ಯದ ವಿವಿಧೆಡೆಗಳಲ್ಲಿ ಫಲಿತಾಂಶದಿಂದ ಹತಾಶಗೊಂಡಿದ್ದ 12 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಲ್ಲಿ ಸತ್ನಾ ಜಿಲ್ಲೆಯ ಅಕ್ಕ-ತಮ್ಮ ಕೂಡ ಸೇರಿದ್ದಾರೆ. ರಷ್ಮಿ ಪಾಂಡೆ (18) 12ನೆಯ ತರಗತಿಯ ಮತ್ತು ದಿಪೇಂದ್ರ ಪಾಂಡೆ (15) 10ನೆಯ ತರಗತಿಯ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದು, ಮನೆಯಲ್ಲಿನ ತಮ್ಮ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೋರ್ವ ವಿದ್ಯಾರ್ಥಿ ಭೋಪಾಲದ ನಮನ್ ಕಡ್ವೆ 10ನೆಯ ತರಗತಿಯ ಪರೀಕ್ಷೆ ಯಲ್ಲಿ ಉತ್ತೀರ್ಣನಾಗಿದ್ದರೂ ತನ್ನ ಶರೀರಕ್ಕೆ ವಿಷದ ಚುಚ್ಚುಮದ್ದನ್ನು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಶೇ.74.4 ಅಂಕಗಳನ್ನು ಗಳಿಸಿದ್ದರೂ ಶೇ.90ರಷ್ಟು ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ ಎಂಬ ಹತಾಶೆಯಿಂದ ಈ ಕೃತ್ಯವನ್ನೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಗ್ವಾಲಿಯರ್‌ನಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಲಾ ಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.