ಕುವೆಂಪು ಸೃಜನಾತ್ಮಕ ಸಾಹಿತ್ಯಕ್ಕೆ ಮಲೆನಾಡು ಪರಿಸರವೆ ಮೂಲದ್ರವ್ಯ: ಡಾ.ಮರುಳಸಿದ್ದಪ್ಪ

ಬೆಂಗಳೂರು, ಮೇ 14: ರಾಷ್ಟ್ರಕವಿ ಕುವೆಂಪುರವರ ಸೃಜನಾತ್ಮಕ ಸಾಹಿತ್ಯ ಸೃಷ್ಟಿಗೆ ಮಲೆನಾಡಿನ ಪರಿಸರವೇ ಮೂಲದ್ರವ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ. ಮರುಳಸಿದ್ದಪ್ಪ ಅಭಿಪ್ರಾಯಿಸಿದ್ದಾರೆ.
ರವಿವಾರ ಅವಿರತ ಟ್ರಸ್ಟ್ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕುವೆಂಪು ಮಲೆನಾಡು’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕುವೆಂಪುರವರ ಕಾದಂಬರಿ, ಕವಿತೆ, ಸಣ್ಣಕತೆ ಹಾಗೂ ವಿಮರ್ಶಾ ಲೇಖನಗಳು ಮಲೆನಾಡಿನ ನೆನಪುಗಳನ್ನು ಹೊತ್ತುಕೊಂಡಿವೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ತಮ್ಮ ಜೀವನದ ಪ್ರಾರಂಭದ 20 ವರ್ಷಗಳು ಮಾತ್ರ ಮಲೆನಾಡಿನಲ್ಲಿ ಕಳೆದಿದ್ದು. ಉಳಿದ 70 ವರ್ಷಗಳು ಮೈಸೂರಿನಲ್ಲಿ ವಾಸವಾಗಿದ್ದರು. ಇಷ್ಟಾಗಿಯೂ ಅವರ ಬಾಲ್ಯದ ಮಲೆನಾಡಿನ ನೆನಪುಗಳನ್ನೇ ತನ್ನ ಸೃಜನಾತ್ಮಕ ಸಾಹಿತ್ಯಕ್ಕೆ ಆಧಾರವಾಗಿಸಿಕೊಂಡ ಜಗತ್ತಿನಲ್ಲಿಯೇ ಅಪರೂಪದ ಸಾಹಿತಿ ಕುವೆಂಪು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕುವೆಂಪುರವರ ‘ಕಾನೂನು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಸೇರಿದಂತೆ ಅವರ ಒಟ್ಟು ಸಾಹಿತ್ಯ ಮಲೆನಾಡಿನ ಗಿರಿಶಿಖರಳಂತೆ ಎತ್ತರದ ಹಾಗೂ ಜಗತ್ತಿಗೆ ಬಹು ಉಪಕಾರಿಯಾಗುವಂತಹ ಸಾಹಿತ್ಯವಾಗಿದೆ. ಇವರ ಸಾಹಿತ್ಯವನ್ನು ಓದಿ ಮಲೆ ನಾಡಿನ ಕುರಿತು ವಿಶೇಷ ಆಸಕ್ತಿಯನ್ನು ಹೊಂದುತಿರುವವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕುವೆಂಪು ಸಾಹಿತ್ಯ ಹಾಗೂ ಅವರ ಬದುಕನ್ನು ಛಾಯಾಚಿತ್ರದ ಮೂಲಕ ಸಂಗ್ರಹಿಸಿ ಓದುಗರಿಗೆ ನೀಡುವ ನಿಟ್ಟಿನಲ್ಲಿ ‘ಕುವೆಂಪು ಮಲೆನಾಡು’ ಕೃತಿಯನ್ನು ಹೊರ ತಂದಿರುವುದು ಶ್ಲಾಘನೀಯ ಕೆಲಸವಾಗಿದೆ. ಕುವೆಂಪುರವರಿಗೆ ಸಂಬಂಧಿಸಿದ ಸುಮಾರು 300 ಛಾಯಾಚಿತ್ರ ಗಳನ್ನೊಳಗೊಂಡ ಕೃತಿ ಇದಾಗಿದ್ದು, ಕುವೆಂಪು ಬಾಲ್ಯದಿಂದ ರಾಷ್ಟ್ರಕವಿ ಸ್ಥಾನಕ್ಕೇರುವವರಿಗೆ ಸಾಗಿಬಂದ ಹಾದಿಯನ್ನು ಓದುಗರಿಗೆ ವೈಚಾರಿಕವಾಗಿ ಹಾಗೂ ಸಾಹಿತ್ಯಕವಾಗಿ ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಲಿದೆ ಎಂದು ಅವರು ಆಶಿಸಿದರು.
ಕುವೆಂಪು ಮಲೆನಾಡು ಕೃತಿಯ ಸಂಪಾದಕ ಹಿರಿಯ ಸಾಹಿತಿ ಡಾ.ಕೆ.ಪುಟ್ಟಸ್ವಾಮಿ ಮಾತನಾಡಿ, ಕುವೆಂಪು ಸಾಹಿತ್ಯದ ಓದು ಎನ್ನುವುದು ಸಮಕಾಲೀನ ಜಗತ್ತಿನೊಂದಿಗೆ ನಡೆಸುವ ಅನುಸಂಧಾನವಾಗಿದೆ. ಹೀಗಾಗಿ ಕುವೆಂಪು ಸಾಹಿತ್ಯ ಹಾಗೂ ಬದುಕನ್ನು ವಿವಿಧ ಮಗ್ಗಲುಗಳಲ್ಲಿ ಅಧ್ಯಾಯನ ಮಾಡುವುದು ಇಂದಿನ ತುರ್ತು ಅಗತ್ಯಗಳಲ್ಲೊಂದು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾತನಾಡಿದರು. ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಹಿರಿಯ ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿ ಹಾಗೂ ಅವಿರತ ಬಳಗದ ಸದಸ್ಯರಿದ್ದರು.
‘ಕುವೆಂಪು ಸಾಹಿತ್ಯ ಹಾಗೂ ಅವರ ಬದುಕು ಸಾವಿರಾರು ವರ್ಷಗಳಿಗೂ ಜೀವಂತವಾಗಿ ಉಳಿಯುವಂತಹದ್ದು. ಹೀಗಾಗಿ ಅವರಿಗೆ ಸಂಬಂಧಿಸಿದ ಪ್ರತಿಯೊಂದನ್ನು ಜೋಪಾನವಾಗಿ ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕಾದದ್ದು ನಮ್ಮ ಜವಾಬ್ದಾರಿ. ಹಾಗೆ ನೋಡಿದರೆ ಅವರ ಹುಟ್ಟಿದ ಮನೆಯನ್ನು ಅದು ಇರುವ ಹಾಗೆಯೇ ಉಳಿಸಿಕೊಳ್ಳಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇನ್ನು ಮುಂದಾದರು ಹಿರಿಯ ಸಾಹಿತಿಗಳ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳ ಹಾಗೂ ವಸ್ತುಗಳನ್ನು ಇರುವ ಹಾಗೆಯೇ ಉಳಿಸಿಕೊಳ್ಳಬೇಕು’
-ಡಾ. ಮರುಳಸಿದ್ದಪ್ಪ, ಹಿರಿಯ ಸಾಹಿತಿ







