ನದಿ ಸಮುದ್ರ ಸೇರುವುದು ಅದರ ಹಕ್ಕು: ನಾಗೇಶ್ ಹೆಗಡೆ
ಬೆಂಗಳೂರು, ಮೇ 14: ಮನಷ್ಯನಿಗೆ ಜೀವಿಸುವ ಹಕ್ಕು ಹೇಗಿದೆಯೋ ಅದೇ ರೀತಿಯಲ್ಲಿ ನದಿಯೊಂದು ಸಮುದ್ರ ಸೇರುವುದು ಅದರ ಹಕ್ಕಾಗಿದೆ ಎಂದು ಹಿರಿಯ ಪರಿಸರ ತಜ್ಞ ನಾಗೇಶ್ ಹೆಗಡೆ ಅಭಿಪ್ರಾಯಿಸಿದ್ದಾರೆ.
ರವಿವಾರ ಅವಿರತ ಟ್ರಸ್ಟ್ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕುವೆಂಪು ಮಲೆನಾಡು’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನದಿಯೊಂದು ಸಮುದ್ರ ಸೇರಿದರೆ ಮಾತ್ರ ಪರಿಸರದ ಸಮತೋಲನ ಸಾಧ್ಯವೆಂದು ತಿಳಿಸಿದರು.
ನದಿಯ ನೀರು ಸಮುದ್ರ ಸೇರಿದರೆ ಮಾತ್ರ ಸಮುದ್ರ ಜೀವಂತಿಕೆಯಿಂದಿರಲು ಸಾಧ್ಯ. ಅಲ್ಲಿ ವಾಸಿಸುವ ಮೀನು ಸೇರಿದಂತೆ ಕೆಲವೊಂದು ಜಲಚರಗಳು ನದಿ ಹೊತ್ತು ತರುವ ಲವಣಾಂಶಗಳಿಂದ ಜೀವಿಸುಂತಹದ್ದು. ಈ ಮೀನುಗಳನ್ನು ಆಧಾರಿಸಿ ಇತರೆ ಜಲಚರಗಳು ಬದುಕುತ್ತಿರುತ್ತವೆ. ಹೀಗಾಗಿ ನದಿಯ ನೀರು ಸಮುದ್ರಕ್ಕೆ ಹೋಗದಿದ್ದರೆ ಮೀನುಗಳು ಉತ್ಪತ್ತಿಯೇ ಆಗುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ನದಿಯೊಂದು ಸಮುದ್ರ ಸೇರಿವುದರಿಂದ ಜಲಚರಕ್ಕೆ ಮಾತ್ರವಲ್ಲ, ಸಾಗುವ ಹಾದಿಯಲ್ಲಿ ಬರುವ ಸಾವಿರಾರು ಪ್ರಾಣಿ, ಪಕ್ಷಿಗಳ ಜೀವಸಂಕಲುಗಳ ಹಾಗೂ ಅರಣ್ಯ ಸಂಪತ್ತಿನ ಉಳಿವಿನ ಬಹುಮುಖ್ಯವಾದ ಭಾಗವಾಗಿದೆ. ಈ ಅರಣ್ಯ ಸಂಪತ್ತು ಉಳಿದರೆ ಮಾತ್ರ ಕಾಲಕಾಲಕ್ಕೆ ಮಳೆ ಬರಲು ಸಾಧ್ಯ. ಹೀಗಾಗಿ ನದಿ ಸಮುದ್ರವನ್ನು ಸೇರದಂತೆ ತಡೆಯುವುದು ಇಡೀ ಭೂ ಮಂಡಲವನ್ನು ನಾಶ ಮಾಡಿದಂತೆ ಎಂದು ಅವರು ಹೇಳಿದರು.
ಲಿಂಗನಮಕ್ಕಿ ಅಣೆಕಟ್ಟು ನಿಶ್ಪ್ರಯೋಜಕ: ಶರಾವತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಅಣೆಕಟ್ಟಿನಿಂದಾಗಿ ತಯಾರಿಸಲಾಗುತ್ತಿರುವ ವಿದ್ಯುತ್ ಅತ್ಯಲ್ಪವಾಗಿದೆ. ಇದರಲ್ಲಿ ತಯಾರಿಸುವ ವಿದ್ಯುತ್‌ನ ಪ್ರಮಾಣಕ್ಕಿಂತ ಹೆಚ್ಚಿನದಾಗಿ ಸೌರ ವಿದ್ಯುತ್ ಯೋಜನೆಗಳಿಂದ ತಯಾರಿಸಬಹುದು. ಹೀಗಾಗಿ ಲಿಂಗನಮಕ್ಕಿ ಅಣೆಕಟ್ಟನ್ನು ಕೆಡವಿ ಶರಾವತಿ ನದಿಯನ್ನು ಸರಾಗವಾಗಿ ಹರಿಯುವಂತೆ ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.
ಕಸ್ತೂರಿ ರಂಗನ್ ವರದಿ ಸೂಕ್ತ: ರಿಯಲ್ ಎಸ್ಟೇಟ್ ಮಾಫಿಯಾ, ಉದ್ಯಮಿಗಳ ಸ್ವಾರ್ಥದಿಂದ ಅಳಿವಿನ ಅಂಚಿನತ್ತ ಸಾಗುತ್ತಿರುವ ಪಶ್ಚಿಮ ಘಟ್ಟಗಳ ಉಳಿವಿಗೆ ಮಾದವ ಗಾಡ್ಗೀಳ್ ವರದಿ ಪರಿಣಾಮಕಾರಿಯಾಗಿತ್ತು. ಆದರೆ, ಕೆಲವು ಪಟ್ಟಭದ್ರರ ಸ್ವಾರ್ಥ ಹಿತಾಸಕ್ತಿಯಿಂದಾರಿ ಆ ವರದಿಯ ಕುರಿತು ವ್ಯಾಪಕ ವಿರೋಧ ವ್ಯಕ್ತವಾಯಿತು. ಇದರ ಬದಲಿಗೆ ಕಸ್ತೂರಿ ರಂಗನ್ ವರದಿ ಸಿದ್ಧಗೊಂಡಿದೆ. ಇದಕ್ಕೂ ಕೆಲವು ಭೂ ಗಳ್ಳರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿಯು ಅರಣ್ಯದಲ್ಲಿ ವಾಸಿಸುವವರಿಗೆ ಪೂರಕವಾಗಿಯೇ ಉಳಿದಿದೆ. ಅರಣ್ಯ ವಾಸಿಗಳು ಮನೆಕಟ್ಟಿಕೊಳ್ಳುವುದಕ್ಕೆ, ಕೃಷಿಗೆ ಹಾಗೂ ಬಾವಿ ತೋಡುದಕ್ಕೆ ಯಾವುದೇ ಅಡ್ಡಿಪಡಿಸಿಲ್ಲ. ಆದರೆ, ಕೆಲವು ಭೂ ಮಾಫಿಯಾಗಳು ಅರಣ್ಯ ವಾಸಿಗಳನ್ನು ಎತ್ತಿಕಟ್ಟಿ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ತಡೆಯುತ್ತಿವೆ ಎಂದು ಅವರು ವಿಷಾಧಿಸಿದರು.
ಅಧಿಕಾರಿಗಳೇ ನೇರ ಹೊಣೆ: ಜನಪ್ರತಿನಿಧಿಗಳು, ಐಎಫ್‌ಎಸ್ ಹಾಗೂ ಐಎಎಸ್ ಅಧಿಕಾರಿಗಳಿಗೆ ಮಾತ್ರ ಪಶ್ಚಿಮಘಟ್ಟಗಳು ಸೇರಿದಂತೆ ಅರಣ್ಯವನ್ನು ರಕ್ಷಿಸುವ ಅಧಿಕಾರ ಇದೆ. ದುರಂತವೆಂದರೇ, ಇಲ್ಲಿರುವ ಬಹುತೇಕ ಅಧಿಕಾರಿಗಳಿಗೆ ಪಶ್ಚಿಮ ಘಟ್ಟಗಳ ಮಹತ್ವದ ಕುರಿತು ಕಿಂಚಿತ್ತೂ ಅರಿವಿಲ್ಲ. ಹೀಗಾಗಿ ಕೇವಲ ಉದ್ಯಮಿಗಳಿಗೆ ಪೂರಕವಾದ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು ನಾಗೇಶ್ ಹೆಗಡೆ ಬೇಸರ ವ್ಯಕ್ತಪಡಿಸಿದರು.
‘ನಾವು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಂಘಟನೆಗಳು ಕಟ್ಟುತ್ತೇವೆ. ಆದರೆ, ಪಶ್ಚಿಮಘಟ್ಟಗಳನ್ನು ಉಳಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಸಂಘಟನೆಯಿಲ್ಲ. ಹೀಗಾಗಿ ಸಂಘಟನೆಯೊಂದನ್ನು ಕಟ್ಟುವ ಮೂಲಕ ಭೂ ಮಂಡಲದಲ್ಲಿ ಜೀವ ಸಂಕುಲ ಉಳಿಯಬೇಕಾದರೆ ಪಶ್ಚಿಮಘಟ್ಟಗಳ ಉಳಿವು ಅಗತ್ಯವೆಂಬ ಅಭಿಪ್ರಾಯವನ್ನು ಜನತೆಗೆ ಮೂಡಿಸಬೇಕಾಗಿದೆ. ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಮಾದವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯನ್ನು ಕನ್ನಡ ಅನುವಾದಿಸಿ ಪುಸ್ತಕಗಳಾಗಿ ಪ್ರಕಟಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ’
-ನಾಗೇಶ್ ಹೆಗಡೆ ಪರಿಸರ ತಜ್ಞ







