ಕಾರ್ಮಿಕರ ಕಲ್ಯಾಣಕ್ಕೆ ಮೀಸಲಾಗಿದ್ದ 20,000 ಕೋ.ರೂ. ಚಹಾ ಪಾರ್ಟಿ, ಮೋಜಿಗೆ ಖರ್ಚಾಗಿದೆಯೇ: ಸುಪ್ರೀಂ ಪ್ರಶ್ನೆ

ಹೊಸದಿಲ್ಲಿ,ಮೇ 14: ಕಾರ್ಮಿಕರ ಕಲ್ಯಾಣಕ್ಕೆಂದು ಮೀಸಲಾಗಿದ್ದ 20,000 ಕೋ.ರೂ.ಎಲ್ಲಿದೆ? ಅಧಿಕಾರಗಳ ಚಹಾ ಪಾರ್ಟಿ ಅಥವಾ ರಜೆಯ ಮೋಜಿಗೆ ಖರ್ಚಾಗಿದೆಯೇ?
ಈ ಪಶ್ನೆಗಳನ್ನು ಮಹಾ ಲೇಖಪಾಲ (ಸಿಎಜಿ)ರ ಮುಂದಿಟ್ಟ ಸರ್ವೋಚ್ಚ ನ್ಯಾಯಾಲಯವು ಅವರಿಗೂ ಉತ್ತರ ಗೊತ್ತಿಲ್ಲದ್ದಕ್ಕೆ ಅಚ್ಚರಿಯನ್ನು ವ್ಯಕ್ತಪಡಿಸಿತು.
‘ನಿರ್ಮಾಣ ಕಾಮಗಾರಿ ಕಾರ್ಮಿಕರಿಗಾಗಿ ಕೇಂದ್ರೀಯ ಶಾಸನಕ್ಕಾಗಿ ರಾಷ್ಟ್ರೀಯ ಅಭಿಯಾನ ಸಮಿತಿ’ ಎಂಬ ಮೈಲುದ್ದದ ಹೆಸರಿನ ಎನ್‌ಜಿಒ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ ಗುಪ್ತಾ ಅವರ ಪೀಠವು ಈ ಪ್ರಶ್ನೆಗಳನ್ನು ಕೇಳಿತು. ಫಲಾನುಭವಿಗಳನ್ನು ಗುರುತಿಸುವ ಮತ್ತು ಸೌಲಭ್ಯಗಳನ್ನು ಅವರಿಗೆ ತಲುಪಿಸುವ ವ್ಯವಸ್ಥೆಯ ಅನುಪಸ್ಥಿತಿಯಿಂದಾಗಿ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಣಕ್ಕೆಂದು ರಿಯಲ್ ಎಸ್ಟೇಟ್ ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕದ ಸಮರ್ಪಕ ಬಳಕೆಯಾಗುತ್ತಿಲ್ಲ ಎಂದು ಅರ್ಜಿಯು ಆರೋಪಿಸಿದೆ.
ಈ ಸಂಬಂಧ ಸಿಎಜಿ ಸಲ್ಲಿಸಿದ್ದ ಪ್ರಮಾಣಪತ್ರ ಮತ್ತು ವರದಿಯನ್ನು ಪರಿಶೀಲಿಸಿದ ಪೀಠವು, ಅದರಲ್ಲಿ ಉಲ್ಲೇಖಿಸಿರುವ ಅಂಶಗಳು ದಿಗ್ಭ್ರಮೆಯನ್ನುಂಟು ಮಾಡುತ್ತಿವೆ ಎಂದು ಹೇಳಿತು.
ಹಣ ಎಲ್ಲಿದೆ ಎನ್ನುವುದು ಸಿಎಜಿಗೂ ಗೊತ್ತಿಲ್ಲ. ಇದು 20,000 ಕೋ.ರೂ.ಗಳ ವಿಷಯವಾಗಿದೆ ಎಂದ ಪೀಠವು, ಹಣ ಎಲ್ಲಿ ಹೋಗಿದೆ ಎನ್ನುವುದನ್ನು ಪತ್ತೆ ಹಚ್ಚುವಂತೆ ಸಿಎಜಿಗೆ ತಾಕೀತು ಮಾಡಿತು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಶುಲ್ಕ ಕಾಯ್ದೆಯು 1996ರಲ್ಲಿ ಜಾರಿಗೆ ಬಂದಾಗಿನಿಂದ ಈ ವರ್ಷದ ಮಾ.31ರವರೆಗೆ ಈ ಕಾಯ್ದೆಯಡಿ ಎಷ್ಟು ಹಣ ಸಂಗ್ರಹವಾಗಿದೆ ಮತ್ತು ಈ ಪೈಕಿ ಎಷ್ಟು ಹಣ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸಂದಾಯವಾಗಿದೆ ಎಂಬ ಮಾಹಿತಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದುಕೊಳ್ಳುವಂತೆ ಮತ್ತು ಎಲ್ಲ ವಿವರಗಳನ್ನು ತನಗೆ ಸಲ್ಲಿಸುವಂತೆ ಸಿಎಜಿಗೆ ಸೂಚಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆ.2ಕ್ಕೆ ನಿಗದಿಗೊಳಿಸಿತು.







