ಕ್ಷುಲ್ಲಕ ಕಾರಣಕ್ಕೆ ಮಗಳಿಂದ ತಾಯಿಯ ಹತ್ಯೆ
ವೃದ್ಧೆಯ ಮೃತದೇಹ ಪತ್ತೆ ಪ್ರಕರಣ

ಬೆಂಗಳೂರು, ಮೇ 14: ವೃದ್ಧೆಯ ಶವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರು ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಮಗಳು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕೆಂಗೇರಿಯ ಗಾಂಧಿನಗರ ನಿವಾಸಿ ಶಶಿಕಲಾ ತನ್ನ ತಾಯಿ ಶಾಂತಕುಮಾರಿ (62) ಅವರನ್ನು 2016ರ ಆಗಸ್ಟ್‌ನಲ್ಲಿ ಕೊಲೆಗೈದು, ಮನೆಯ ವಾರ್ಡ್‌ರೋಬ್ನಲ್ಲಿಟ್ಟು, ಶಶಿಕಲಾ ಮತ್ತು ಆಕೆಯ ಪುತ್ರ ಸಂಜಯ್ ಪರಾರಿಯಾಗಿದ್ದರು ಎಂದು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ವೃದ್ಧೆ ಶಾಂತಕುಮಾರಿಗೆ ಸಂಜಯ್ ತಂದಿದ್ದ ಊಟ ನೀಡಿದ್ದು, ಅದನ್ನು ತಾಯಿ ನಿರಾಕರಿಸಿದರೆಂದು ಕೋಪಗೊಂಡ ಶಶಿಕಲಾ ಲಟ್ಟಣಿಗೆಯಿಂದ ತಾಯಿಯ ತಲೆಗೆ ಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ಶಾಂತಕುಮಾರಿ ರಕ್ತಸ್ರಾವವಾಗಿ ಮೃತಪಟ್ಟಿದ್ದು, ಶಶಿಕಲಾ ಮತ್ತು ಆಕೆಯ ಪುತ್ರ ಸಂಜಯ್ ಶವವನ್ನು ಮನೆಯೊಳಗೆ ಹೂಳಲು ಯತ್ನಿಸಿದ್ದು, ಅದು ಸಾಧ್ಯವಾಗದ ಕಾರಣ ಮೃತದೇಹವನ್ನು ಮನೆಯಲ್ಲೇ ಬಿಟ್ಟು ಪಾರಾರಿಯಾಗಿದ್ದರು ಎಂದು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಹೂಳಲು ಸಹಾಯ ಮಾಡಿದ್ದಾನೆ ಎನ್ನಲಾದ ಆರೋಪಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದು ಈ ವೇಳೆ ಹೆಚ್ಚಿನ ಮಾಹಿತಿ ದೊರೆಯಿತು ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಹಾಗೂ ಆಕೆಯ ಪುತ್ರ ಸಂಜಯ್ ತಲೆ ಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.





