ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೇಂದ್ರದಿಂದ 11,724 ಕೋ.ರೂ.ವೆಚ್ಚದಲ್ಲಿ ರಸ್ತೆ ನಿರ್ಮಾಣ

ಹೊಸದಿಲ್ಲಿ,ಮೇ 14: ಛತ್ತೀಸ್‌ಗಡದ ಸುಕ್ಮಾ ಸೇರಿದಂಂತೆ 44 ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕವನ್ನು ಒದಗಿದಲು 11,724.53 ಕೋ.ರೂ.ಗಳ ಯೋಜನೆಗೆ ಕೇಂದ್ರವು ಶೀಘ್ರವೇ ಚಾಲನೆ ನೀಡಲಿದೆ.
ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಪಡೆಗಳ ನಿಯೋಜನೆ ಸೇರಿದಂತೆ ಆಡಳಿತಾತ್ಮಕ ವೆಚ್ಚಗಳಿಗಾಗಿ ಒಟ್ಟು ಯೋಜನಾ ವೆಚ್ಚದ ಶೇ.5ರಷ್ಟು ಅಂದರೆ 550 ಕೋ.ರೂ.ಗಳನ್ನು ಮೀಸಲಿರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ಉತ್ತಮಗೊಳಿಸಲು ಈ ಯೋಜನೆಗೆ ಕೇಂದ್ರ ಸಂಪುಟವು ಕಳೆದ ವರ್ಷ ಒಪ್ಪಿಗೆ ನೀಡಿತ್ತು. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಯಡಿ ಈ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯಲಿವೆ.
ನಕ್ಸಲ್ ಪೀಡಿತ 44 ಜಿಲ್ಲೆಗಳ ಪೈಕಿ ಗರಿಷ್ಠ ಜಿಲ್ಲೆಗಳು ಛತ್ತೀಸ್‌ಗಡದಲ್ಲಿದ್ದು, ಅಲ್ಲಿಯ ಸುಕ್ಮಾ ಜಿಲ್ಲೆಯಲ್ಲಿ ಕಳೆದ ತಿಂಗಳು ಸಿಆರ್‌ಪಿಎಫ್‌ನ 25 ಸಿಬ್ಬಂದಿಗಳು ನಕ್ಸಲ್ ದಾಳಿಗೆ ಬಲಿಯಾಗಿದ್ದರು. ಒಡಿಶಾ, ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಈ ಯೋಜನೆಯ ವ್ಯಾಪ್ತಿಯಲ್ಲಿರುವ ಇತರ ರಾಜ್ಯಗಳಾಗಿವೆ.





