ಅಕ್ರಮ ಕಲ್ಲು ಸಾಗಾಣಿಕೆ: ಲಾರಿಗಳು ವಶ

ಗುಂಡ್ಲುಪೇಟೆ ಮೇ 14 :ಅಂತಾರಾಜ್ಯಕ್ಕೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ತಹಶೀಲ್ದಾರ್ ದಾಳಿ ಮಾಡಿ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಸಮೀಪವಿರುವ ಗುಮ್ಮಕ್ಕನ ಕಲ್ಲುಗುಡ್ಡದಿಂದ ಪ್ರತಿನಿತ್ಯ 30ಕ್ಕೂ ಹೆಚ್ಚು ಲಾರಿಗಳು ಕೇರಳ ರಾಜ್ಯಕ್ಕೆ ಹೋಗುತ್ತಿದ್ದವು, ಅಲ್ಲದೇ 10ಟನ್ ಗೆ ಪರವಾನಗಿ ಪಡೆದು 30ಕ್ಕೂ ಹೆಚ್ಚು ಟನ್ ಸಾಗಾಟ ಮಾಡುತ್ತಿದ್ದು ಹಾಗೂ ಕೆಲವು ಲಾರಿಗಳು ಅನುಮತಿ ಪಡೆಯದೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಕೊಳ್ಳೇಗಾಲ ಉಪ ವಿಭಾಗಾಧಿಕಾರಿಗೆ ಬಂದ ದೂರಿನ ಆಧಾರದ ಮೇಲೆ ಗುಂಡ್ಲುಪೇಟೆ ತಹಶೀಲ್ದಾರ್ ಕೆ ಸಿದ್ದು ಮದ್ದೂರು ಪೊಲೀಸ್ ಚೆಕ್ ಪೋಸ್ಟ್ ಸಮೀಪ ದಾಳಿ ನಡೆಸಿ ಕೇರಳ ನೊಂದಣಿಯ ಕೆ.ಎಲ್-48 ಎಚ್ 3814, ಕೆಎಲ್-08 ಬಿಜಿ-8078 ಹಾಗೂ ಕೆಎಲ್-08 ಬಿಜಿ 8060 ಸಂಖ್ಯೆಯ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಈ ಸಂದರ್ಭ ಲಾರಿ ಚಾಲಕರು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ಹಂಗಳ ನಾಡ ಕಚೇರಿಯ ಪ್ರಭಾರರಾಜಸ್ವ, ನಿರೀಕ್ಷಕರು ನದೀ ಹುಸೈನ್, ಗ್ರಾಮ ಲೆಕ್ಕಾಧಿಕಾರಿ ಗವಂತರಾಯಪ್ಪ ಹಾಜರಿದ್ದರು.





