ಟೀಕಿಸುವ ಮೊದಲು ಯೋಚಿಸಬೇಕು: ಡಾ.ಎಸ್.ನಾಗರಾಜ್

ಬೆಂಗಳೂರು, ಮೇ 14: ಪ್ರತಿಯೊಬ್ಬರಿಗೂ ತಮ್ಮದೇ ಆದ ಆಲೋಚನೆಗಳಿತ್ತವೆ ಹಾಗೂ ಅದರ ಹಿಂದೆ ಶ್ರಮವಿರುತ್ತದೆ. ಹೀಗಾಗಿ ಟೀಕೆ ಮಾಡುವ ಮೊದಲು ನಾವೆಷ್ಟು ಸರಿ ಎಂಬುದನ್ನು ಯೋಚಿಸಬೇಕು ಎಂದು ಪುರಾತತ್ವ ಶಾಸ್ತ್ರಜ್ಞ ಡಾ.ಎಸ್.ನಾಗರಾಜ್ ಇಂದಿಲ್ಲಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ಆಯೋಜಿಸಿದ್ದ ‘ಚಿದಾನಂದ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಪ್ರಾರಂಭದಲ್ಲಿ ಯಾವುದಾದರೊಂದು ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದರೆ, ಆ ವಿಷಯದ ಕುರಿತು ಬರೆಯುತ್ತಿದ ಅನೇಕರ ಅಭಿಪ್ರಾಯಗಳ ವಿರುದ್ದವಾಗಿ ಬರೆಯುತ್ತಿದೆ. ಆದರೆ, ನಂತರದ ದಿನಗಳಲ್ಲಿ ಡಾ.ಚಿದಾನಂದ ಮೂರ್ತಿಯ ಬರಹಗಳಿಂದ ಪ್ರೇರಿತನಾದ ನಾನು, ನನ್ನ ಅಭಿಪ್ರಾಯ ಬದಲಾಯಿಸಿಕೊಂಡೆ. ಅಭಿಪ್ರಾಯ ಹಂಚಿಕೊಳ್ಳುವುದು ಎಲ್ಲರ ಕರ್ತವ್ಯ. ಆದರೆ, ಇನ್ನೊಬ್ಬರ ಅಭಿಪ್ರಾಯ ಖಂಡಿಸುವುದು ತಪ್ಪು ಎಂಬುದನ್ನು ಕಲಿತುಕೊಂಡೆ ಎಂದರು.
ಯಾವ ಸಂಶೋಧನೆಯು ಸಮಗ್ರವಾಗಿ, ಸ್ಪಷ್ಟವಾಗಿ ಮತ್ತು ಶಾಸೀಯವಾಗಿ ಇರುತ್ತದೆ ಅದು ಒಂದು ಉತ್ತಮ ಸಂಶೋಧನೆಯಾಗಲು ಸಾಧ್ಯ. ಅನೇಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡಬಹುದು,ಆದರೆ ಈ ವಸ್ತು ಎಲ್ಲಿ, ಯಾರು, ಹೇಗೆ, ಯಾಕೆ, ಎಲ್ಲಿ, ಏನು ಎಂಬುದನ್ನು ನಾವು ತಿಳಿಯಬೇಕು ಆಗ ಮಾತ್ರ ನಮ್ಮ ಸಂಶೋಧನೆಯು ಯಶಸ್ವಿಯಾಗಲು ಸಾಧ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅನೇಕ ಕೆರೆಗಳು ನಿರ್ಮಾಣವಾಗಿ ಆ ಭಾಗದ ರೈತರು ಸಾಮಾಜಿಕವಾಗಿ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿತು ಎಂದು ನುಡಿದರು.
ಯಾವುದೇ ಒಂದು ವಿಷಯ ಕುರಿತು ಸಂಶೋಧನೆ ಮಾಡಬೇಕಾದರೆ ಅದರ ಬಗ್ಗೆ ಸಮಗ್ರ ಅಧ್ಯಯನ ಮಾಡಬೇಕು. ಯಾವುದೇ ಒಂದು ವಿಷಯದ ಕುರಿತು ಸಂಶೋಧನೆ ಮಾಡಬೇಕಾದ ಸಂದರ್ಭದಲ್ಲಿ ಸಂಶೋಧಕನ್ನು ಏಕೆ, ಹೇಗೆ ,ಎಷ್ಟು , ಯಾವಾಗ ಎಂದು ಪ್ರಶ್ನಿಸಬೇಕು. ಆಗ ಮಾತ್ರ ನಮ್ಮಿಂದ ಒಂದು ಸಂಪತ್ತ ಬರಿತವಾದ ಸಂಶೋಧನೆಯನ್ನು ಮಾಡಲು ಸಾಧ್ಯ.ಇಂದಿನ ಯುವ ಸಂಶೋಧಕರು ಇಂತಹ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಡಾ.ಅ. ಸುಂದರ ಮಾತನಾಡಿ, ಒಬ್ಬ ಶಿಕ್ಷಣ ಯೋಗ್ಯತೆ ಹಾಗೂ ಗುಣ ತಿಳಿಯಬೇಕಾದ ನಿಜವಾದ ಪ್ರಮಾಣವೆಂದರೆ, ಅವರ ಶಿಷ್ಯರು ತಮ್ಮ ಗುರುಗಳ ಬಗ್ಗೆ ಅವರು ಇಟ್ಟಿರುವ ವಿಶ್ವಾಸ. ತಮ್ಮ ಶಿಷ್ಯರು ತಮ್ಮಗೆ ಸಲ್ಲಿಸುವ ಗೌರವ ನಿಜವಾದ ಪ್ರಶಸ್ತಿ. ಭಾರತೀಯ ಸಂಶೋಧನಾ ಕ್ಷೇತ್ರಕ್ಕೆ ಡಾ. ಎಸ್.ನಾಗರಾಜ ಅವರ ಕೊಡುಗೆ ಅಪಾರವಾದದ್ದು. ಪ್ರತಿಯೊಬ್ಬ ಸಂಶೋಧಕನ್ನು ತಾನು ಮಾಡಿದ ಸಂಶೋಧನೆ ಹೇಗೆ ಇದೆ ಎಂದು ಅಭಿಪ್ರಾಯ ಕೇಳುತ್ತಾನೆ. ನಾವು ಅದಕ್ಕೆ ನಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕೆ ವಿನಹ ಅದನ್ನು ಖಂಡಿಸಬಾರದು ಎಂದು ತಿಳಿಸಿದರು.
ಅನೇಕ ಸಂಶೋಧಕರು ಬೇರೆಯವರ ಸಂಶೋಧನೆಯನ್ನು ಓದುವುದೆ ಇಲ್ಲ. ನಮ್ಮ ಬರವಣಿಗೆಯೇ ಶ್ರೇಷ್ಠ, ಇತರರ ಬರವಣಿಗೆ ಶ್ರೇಷ್ಠವಲ್ಲ ಎಂಬ ಭಾವನೆಯನ್ನು ನಾವುಗಳು ಬಿಡಬೇಕು. ಸಂಶೋಧಕರಿಗೆ ಸಾಹಸದ ಮನೋಭಾವ ಇರಬೇಕು ಅಂದಾಗ ಮಾತ್ರ ಉತ್ತಮ ಸಂಶೋಧನೆ ನಡೆಸಲು ಸಾಧ್ಯ ಎಂದು ಅವರು ಹೇಳಿದರು.
ನಾಡೋಜ ಡಾ. ಎಂ.ಚಿದಾನಂದ ಮೂರ್ತಿ, ಮೈಸೂರು ವಿವಿ ನಿವೃತ್ತ ಶಾಸನ ತಜ್ಞ ಎಚ್.ಎಂ. ನಾಗರಾಜರಾವ್, ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ಸಿ.ಯು.ಮಂಜುನಾಥ, ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ, ಲಲಿತಮ್ಮ ಎಸ್.ನಾಗರಾಜ ಸೇರಿದಂತೆ ಇತರರು ಇದ್ದರು.







