ಮೇಕೆಗಳನ್ನು ಮಾರಿ 102 ವರ್ಷದ ಅತ್ತೆಗಾಗಿ ಶೌಚಾಲಯ ಕಟ್ಟಿಸಿದ 90 ವರ್ಷದ ವೃದ್ಧೆ

ಕಾನ್ಪುರ, ಮೇ 14: ತನ್ನ 5 ಮೇಕೆಗಳನ್ನು ಮಾರಿ 102 ವರ್ಷದ ಅತ್ತೆಗಾಗಿ 90 ವರ್ಷದ ವೃದ್ಧೆಯೊಬ್ಬರು ಶೌಚಾಲಯ ನಿರ್ಮಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿದೆ.
ಶೌಚಾಲಯವಿಲ್ಲದ ಕಾರಣ ಬಯಲುಶೌಚಕ್ಕೆ ತೆರಳಿದ್ದ ಅತ್ತೆ ಜಾರಿಬಿದ್ದು ಕಾಲುಮುರಿದ ನಂತರ 90 ವರ್ಷದ ಚಂದನಾ ಈ ನಿರ್ಧಾರಕ್ಕೆ ಬಂದಿದ್ದರು.
ಶೌಚಾಲಯ ನಿರ್ಮಿಸಲು ಗ್ರಾಪಂ ಹಾಗೂ ಜಿಲ್ಲೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ. ಆದ್ದರಿಂದ ತನ್ನ ತಾಯಿಯೇ ಶೌಚಾಲಯ ಕಟ್ಟಿಸಲು ಮುಂದಾದರು ಎಂದು ಚಂದನಾರ ಪುತ್ರ ರಾಮ್ ಪ್ರಕಾಶ್ ಹೇಳಿದ್ದಾರೆ. ಶೌಚಾಲಯ ನಿರ್ಮಾಣ ಆರಂಭಿಸಿದಾಗ ಆರ್ಥಿಕ ತೊಂದರೆ ಎದುರಾಗಿದ್ದು, ಚಂದನಾ ತನ್ನ ಮೇಕೆಗಳನ್ನು ಮಾರಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣದ ಬಗೆಗಿನ ಕೇಂದ್ರ ಸರಕಾರದ ಅಭಿಯಾನಕ್ಕೆ ಚಂದನಾ ಅವರು ರಾಯಭಾರಿಯಾಗುವ ಸಾಧ್ಯತೆಗಳಿವೆ.
Next Story





