ಮೂರನೆ ಟೆಸ್ಟ್: ವಿಂಡೀಸ್ ಗೆಲುವಿಗೆ 304 ರನ್ ಗುರಿ

ಡೊಮಿನಿಕ, ಮೇ 14: ಪಾಕಿಸ್ತಾನ ತಂಡ ಇಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ತಂಡದ ಗೆಲುವಿಗೆ 304 ರನ್ ಗುರಿ ನೀಡಿದೆ.
ನಾಲ್ಕನೆ ದಿನವಾದ ಶನಿವಾರ ಆಟ ಕೊನೆಗೊಂಡಾಗ ವಿಂಡೀಸ್ ಎರಡನೆ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 7 ರನ್ ಗಳಿಸಿದೆ. ಸ್ಪಿನ್ನರ್ ಯಾಸಿರ್ ಶಾ ವಿಂಡೀಸ್ ಆರಂಭಿಕ ಆಟಗಾರ ಪೊವೆಲ್(4) ವಿಕೆಟ್ ಉಡಾಯಿಸಿದರು.
ಇದಕ್ಕೆ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 218 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ವೆಸ್ಟ್‌ಇಂಡೀಸ್ 115 ಓವರ್‌ಗಳಲ್ಲಿ 247 ರನ್‌ಗೆ ಆಲೌಟಾಯಿತು. ಪಾಕ್‌ಗೆ 129 ರನ್ ಮುನ್ನಡೆ ಬಿಟ್ಟುಕೊಟ್ಟಿತು.
ವಿಂಡೀಸ್‌ನ ಪರ ಚೇಸ್(69 ರನ್) ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಹೋಲ್ಡರ್(ಅಜೇಯ 30) ಕೆಳ ಕ್ರಮಾಂಕದಲ್ಲಿ ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತವನ್ನು 247ಕ್ಕೆ ಏರಿಸಿದರು. ಪಾಕ್ ಪರ ಮುಹಮ್ಮದ್ ಅಬ್ಬಾಸ್(5-46) ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಯಾಸಿರ್ ಶಾ(3-126) ಮೂರು ವಿಕೆಟ್ ಕಬಳಿಸಿದರು.
ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡ ಜೋಸೆಫ್(3-53), ಗ್ಯಾಬ್ರಿಯೆಲ್(2-24) ಹಾಗೂ ಬಿಶೂ(2-54) ದಾಳಿಗೆ ಸಿಲುಕಿ ರನ್ ಗಳಿಸಲು ಪರದಾಟ ನಡೆಸಿತು. 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಗೆಲುವಿಗೆ 304 ರನ್ ಗುರಿ ನೀಡಿತು.
ಪಾಕ್ ಪರ ಸ್ಪಿನ್ನರ್ ಯಾಸಿರ್ ಶಾ(ಅಜೇಯ 38) ಸರ್ವಾಧಿಕ ರನ್ ಗಳಿಸಿದರು. ವಿದಾಯದ ಪಂದ್ಯವನ್ನಾಡುತ್ತಿರುವ ಯೂನಿಸ್ ಖಾನ್(35), ಮುಹಮ್ಮದ್ ಆಮಿರ್(27) ಹಾಗೂ ಶಾನ್ ಮಸೂದ್(21) ಎರಡಂಕೆಯ ಸ್ಕೋರ್ ದಾಖಲಿಸಿದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 376
ಪಾಕಿಸ್ತಾನ ಎರಡನೆ ಇನಿಂಗ್ಸ್: 174/8 ಡಿಕ್ಲೇರ್
(ಯಾಸಿರ್ ಶಾ ಅಜೇಯ 38, ಯೂನಿಸ್ ಖಾನ್ 35, ಜೋಸೆಫ್ 3-53, ಗ್ಯಾಬ್ರಿಯೆಲ್ 2-24, ಬಿಶೂ 2-54)
ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್: 247
ವೆಸ್ಟ್‌ಇಂಡೀಸ್ ಎರಡನೆ ಇನಿಂಗ್ಸ್: 7/1







