ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆ: ನಾರಂಗ್‌ಗೆ ಬೆಳ್ಳಿ

ಪುಣೆ, ಮೇ 14: ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ 50 ಮೀ.ರೈಫಲ್ ಪ್ರೋನ್ ಫೈನಲ್‌ನಲ್ಲಿ ಸ್ವೀಡನ್‌ನ ಕಾರ್ಲ್ ಒಲ್ಸನ್ ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಶೂಟರ್ ಗಗನ್ ನಾರಂಗ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಶನಿವಾರ ನಡೆದ 8 ಶೂಟರ್‌ಗಳು ಭಾಗವಹಿಸಿದ್ದ ಫೈನಲ್ ಸುತ್ತಿನಲ್ಲಿ ನಾರಂಗ್ 250 ಅಂಕ ಗಳಿಸಿದರು. ಸ್ವೀಡನ್‌ನ ಕಾರ್ಲ್ 250.1 ಅಂಕ ಗಳಿಸಿದರು. ಈ ಇಬ್ಬರು ಶೂಟರ್‌ಗಳು 50 ಮೀ. ರೈಫಲ್ ಪ್ರೋನ್‌ನಲ್ಲಿ ವಿಶ್ವದಾಖಲೆಯೊಂದನ್ನು ಮುರಿದು ಗಮನ ಸೆಳೆದರು.
ಈ ವರ್ಷದ ಫೆಬ್ರವರಿಯಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಫೈನಲ್ ಸುತ್ತಿನಲ್ಲಿ 249.8 ಅಂಕ ಗಳಿಸಿದ ಜಪಾನ್‌ನ ಟೊಶಿಕಾಝು ಯಮಶಿಟಾ ವಿಶ್ವ ದಾಖಲೆ ನಿರ್ಮಿಸಿದ್ದರು.
ನಾರಂಗ್ ಫೈನಲ್ ಸುತ್ತಿನ 22ನೆ ಶಾಟ್‌ನಲ್ಲಿ 229.9 ಅಂಕವನ್ನು ಗಳಿಸಿ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದರು. 23ನೆ ಶಾಟ್‌ನಲ್ಲಿ 9.9 ಅಂಕ ಗಳಿಸಿದ ನಾರಂಗ್ ಎಡವಿದರು. ಪ್ರತಿಸ್ಪರ್ಧಿ ಕಾರ್ಲ್ 10.3 ಅಂಕ ಗಳಿಸಿದ್ದರು. ಅಂತಿಮ ಶಾಟ್(24)ನಲ್ಲಿ 10.3 ಅಂಕ ಗಳಿಸಿದ ನಾರಂಗ್ ಚೇತರಿಕೆಯ ಪ್ರದರ್ಶನ ನೀಡಿದರೂ 10 ಅಂಕ ಗಳಿಸಿದ ಕಾರ್ಲ್ ಚಿನ್ನದ ಪದಕ ತನ್ನದಾಗಿಸಿಕೊಂಡರು.
ನಾರಂಗ್ 624.8 ಅಂಕ ಗಳಿಸಿ ಐದನೆ ಸ್ಥಾನಿಯಾಗಿ ಫೈನಲ್‌ಗೆ ತಲುಪಿದ್ದರು. ಭಾರತದ ಇನ್ನೋರ್ವ ಶೂಟರ್ ಸ್ವಪ್ನಿಲ್ ಕುಸಾಲೆ(ಮಹಾರಾಷ್ಟ್ರ) 626.1 ಅಂಕ ಗಳಿಸಿ 4ನೆ ಸ್ಥಾನ ಪಡೆದಿದ್ದರು. ಸ್ವಪ್ನಿಲ್ ಫೈನಲ್‌ನಲ್ಲಿ 145 ಅಂಕ ಗಳಿಸಿ ಐದನೆ ಸ್ಥಾನ ಪಡೆದರು.
ನಾರಂಗ್ ತಾನು ಗೆದ್ದ ಬೆಳ್ಳಿ ಪದಕವನ್ನು ಇತ್ತೀಚೆಗೆ ನಾಸಿಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದ ಕ್ರೀಡಾ ಮನಃಶಾಸ್ತ್ರಜ್ಞ, ಸಲಹೆಗಾರ ಭೀಷ್ಮರಾಜ್‌ಗೆ ಸಮರ್ಪಿಸಿದರು. ಭೀಷ್ಮರಾಜ್ ನಾರಂಗ್ ಸಹಿತ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಶೂಟರ್‌ಗಳು ಹಾಗೂ ಕ್ರೀಡಾಪಟುಗಳಿಗೆ ಸಲಹಾಗಾರರಾಗಿದ್ದರು.







