ಮಹಿಳಾ ಹಾಕಿ ಟೆಸ್ಟ್ ಸರಣಿ: ಕಿವೀಸ್ ವಿರುದ್ಧ ಭಾರತಕ್ಕೆ ಸೋಲು
ಹ್ಯಾಮಿಲ್ಟನ್, ಮೇ 14: ಆತಿಥೇಯ ನ್ಯೂಝಿಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡ 1-4 ರಿಂದ ಸೋತಿದೆ.
ಇಲ್ಲಿ ರವಿವಾರ ನಡೆದ ಮೊದಲ ಟೆಸ್ಟ್ ಪಂದ್ಯದುದ್ದಕ್ಕೂ ಆಕ್ರಮಣಕಾರಿ ಪ್ರದರ್ಶನ ನೀಡಿದ ನ್ಯೂಝಿಲೆಂಡ್ ತಂಡ ಭಾರತಕ್ಕೆ ಒತ್ತಡ ಹೇರಲು ಯತ್ನಿಸಿತು. ಭಾರತದ ಮಹಿಳೆಯರು ಉತ್ತಮ ಆರಂಭ ಪಡೆದಿದ್ದು, ಕಿವೀಸ್ ಸವಾಲನ್ನು ದಿಟ್ಟವಾಗಿ ಎದುರಿಸಿ ಗೋಲು ಬಾರಿಸಲು ನಿರಾಕರಿಸಿದರು.
13ನೆ ನಿಮಿಷದಲ್ಲಿ ಜೋರ್ಡನ್ ಗ್ರಾಂಟ್ ಗೋಲು ಬಾರಿಸಿ ಕಿವೀಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 23ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಒಲಿವಿಯಾ ಮೇರಿ ಕಿವೀಸ್‌ನ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಮೊದಲಾರ್ಧದಲ್ಲಿ ನ್ಯೂಝಿಲೆಂಡ್ 2-0 ಮುನ್ನಡೆ ಕಾಯ್ದುಕೊಂಡಿತು.
31ನೆ ನಿಮಿಷದಲ್ಲಿ ಗೋಲು ಬಾರಿಸಿದ ಅನೂಪಾ ಬಾರ್ಲ ಕಿವೀಸ್ ಮುನ್ನಡೆ 1-2ಕ್ಕೆ ತಗ್ಗಿಸಿದರು. 43ನೆ ನಿಮಿಷದಲ್ಲಿ ನ್ಯೂಝಿಲೆಂಡ್ 3ನೆ ಗೋಲು ಬಾರಿಸಿತು. ರಚೆಲ್ ಮೆಕ್‌ಕಾನ್ ಆತಿಥೇಯರಿಗೆ 3-1 ಮುನ್ನಡೆ ಒದಗಿಸಿದರು. 55ನೆ ನಿಮಿಷದಲ್ಲಿ ನಾಲ್ಕನೆ ಗೋಲು ಬಾರಿಸಿದ ಕಿವೀಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ 4-1 ಅಂತರದಿಂದ ಜಯ ಸಾಧಿಸಿತು.
ಭಾರತ ಮೇ 16 ರಂದು ನ್ಯೂಝಿಲೆಂಡ್‌ನ ವಿರುದ್ಧ ಎರಡನೆ ಪಂದ್ಯವನ್ನಾಡಲಿದೆ.





