ಈಶಾನ್ಯ ರಾಜ್ಯಗಳಲ್ಲಿ ಸೌರವಿದ್ಯುತ್ ಜಾಗೃತಿಗೆ ಮುಂದಾದ ಸೆಲ್ಕೋ
ಮಣಿಪಾಲದಲ್ಲಿ ಸೌರವಿದ್ಯುತ್ ಉದ್ದಿಮೆದಾರರ ಸಭೆ

ಉಡುಪಿ, ಮೇ 14: ತೀವ್ರ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಒರಿಸ್ಸಾ, ಅಸ್ಸಾಂ, ಮೇಘಾಲಯ ಹಾಗೂ ಮಣಿಪುರ ರಾಜ್ಯಗಳಲ್ಲಿ ಸೌರಶಕ್ತಿ ವಿದ್ಯುತ್‌ನ್ನು ಜನಪ್ರಿಯಗೊಳಿಸುವ ಗುರಿಯೊಂದಿಗೆ ಸೌರವಿದ್ಯುತ್ ವಲಯದಲ್ಲಿ ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಸೆಲ್ಕೋ ಫೌಂಡೇಷನ್ ಇದೀಗ ಅಲ್ಲಿನ ಸೌರವಿದ್ಯುತ್ ಉದ್ದಿಮೆದಾರರಿಗೆ ಕಾರ್ಯಾಗಾರವೊಂದನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಹಮ್ಮಿಕೊಂಡಿದೆ.
ಸೆಲ್ಕೋ ಫೌಂಡೇಷನ್ ತನ್ನ ಸೆಲ್ಕೋ ಇನ್‌ಕ್ಯೂಬೇಶನ್ ಕಾರ್ಯಕ್ರಮದ ಮೂಲಕ ದೇಶದ ಒರಿಸ್ಸಾ ಹಾಗೂ ಈಶಾನ್ಯ ರಾಜ್ಯಗಳ ತೀರಾ ಹಿಂದುಳಿದ ಪ್ರದೇಶಗಳಿಗೆ ಸೌರವಿದ್ಯುತ್‌ನ್ನು ಅಳವಡಿಸುವುದಕ್ಕಾಗಿ ಅಲ್ಲಿನ ಆಯ್ದ ಉದ್ದಿಮೆದಾರರಿಗೆ ಮಣಿಪಾಲದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು ಇದರಲ್ಲಿ 12 ಮಂದಿ ಉದ್ದಿಮೆದಾರರು ಭಾಗವಹಿಸಿದ್ದರು.
ಈ ಯುವ ಉತ್ಸಾಹಿ ಉದ್ದಿಮೆದಾರರನ್ನುದ್ದೇಶಿಸಿ ಮಾತನಾಡಿದ ಸೆಲ್ಕೋದ ಸಿಒಒ ಮೋಹನ್ ಹೆಗಡೆ, ದೇಶದಲ್ಲಿ ಈಗಲೂ 30 ಕೋಟಿ ಜನತೆಗೆ ವಿದ್ಯುತ್ ಸಂಪರ್ಕವೇ ಇಲ್ಲ. ಇದರಿಂದ ದೇಶದ ಅಭಿವೃದ್ಧಿಗೆ ತೀವ್ರ ಹಿನ್ನಡೆಯುಂಟಾ ಗಿದೆ. ಅದರಲ್ಲೂ ಅಭಿವೃದ್ಧಿಯ ದೃಷ್ಠಿಯಿಂದ ತೀರಾ ಹಿಂದುಳಿದಿರುವ ಅಸ್ಸಾಂ, ಮೇಘಾಲಯ, ಮಣಿಪುರದಂಥ ರಾಜ್ಯಗಳಲ್ಲಿ ಶೇ.40ರಷ್ಟು ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿದ್ದು, ಉಳಿದ ಶೇ.60ರಷ್ಟು ಮಂದಿ ಕಟ್ಟಿಗೆ, ಸೀಮೆಎಣ್ಣೆಯನ್ನೇ ಬೆಳಕಿಗಾಗಿ ಅವಲಂಬಿಸಿದ್ದಾರೆ ಎಂದರು.
ಕರ್ನಾಟಕದಲ್ಲಿ ಸೌರವಿದ್ಯುತ್‌ನ್ನು ಜನಪ್ರಿಯಗೊಳಿಸಿರುವ ಡಾ.ಹರೀಶ್ ಹಂದೆ ನೇತೃತ್ವದ ಸೆಲ್ಕೋ ಫೌಂಡೇಷನ್, ಇದೀಗ ಒರಿಸ್ಸಾ ಹಾಗೂ ಈಶಾನ್ಯ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್‌ನ್ನು ಜನತೆಗೆ ನೀಡಲು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದಕ್ಕಾಗಿ ಅಲ್ಲಿನ ಆಸಕ್ತ ಯುವ ಉದ್ದಿಮೆದಾರರಿಗೆ ಸೌರವಿದ್ಯುತ್ ಅಳವಡಿಕೆಗೆ ತಾಂತ್ರಿಕ ತರಬೇತಿ, ಹಣಕಾಸಿನ ಬೆಂಬಲ ಹಾಗೂ ಇನ್ನಿತರ ಅಗತ್ಯ ನೆರವು ನೀಡಲು ಮುಂದಾಗಿದೆ ಎಂದರು.
ಈಶಾನ್ಯ ರಾಜ್ಯಗಳಲ್ಲಿ ದಿನದಲ್ಲಿ ಕೆಲವೇ ಗಂಟೆ ವಿದ್ಯುತ್ ಇದ್ದು, ಮನೆ ದೂರದೂರ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕವೇ ಸಿಕ್ಕಿಲ್ಲ. ಇಂಥ ಕಡೆಗಳಲ್ಲಿ ಸೌರವಿದ್ಯುತ್‌ನ್ನು ಜನಪ್ರಿಯಗೊಳಿಸಲು ಕೆಲವು ಕಾರ್ಯಕ್ರಮಗಳನ್ನು ರೂಪಿಸಲು ಸಂಸ್ಥೆ ಸ್ವತ ಮುಂದಾಗುವ ಬದಲು ಅಲ್ಲಿನ ಆಸಕ್ತ ಸ್ಥಳೀಯ ಉದ್ದಿಮೆದಾರರನ್ನು ಪ್ರೋತ್ಸಾಹಿಸಲು ಅವರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ 20-25 ವರ್ಷಗಳ ಹಿಂದೆ ಯಾವ ಸ್ಥಿತಿ ಇತ್ತೋ ಈಶಾನ್ಯದ ರಾಜ್ಯಗಳು ಈಗ ಅದೇ ಸ್ಥಿತಿಯಲ್ಲಿವೆ. ಈ ರಾಜ್ಯಗಳ ಗ್ರಾಮೀಣ ಜನರ ಆರೋಗ್ಯ ಸ್ಥಿತಿಗತಿಯನ್ನು ಸುಧಾರಿಸಲು, ಸೌರವಿದ್ಯುತ್‌ನಿಂದ ನಡೆಯುವ ಬ್ರಹ್ಮಪುತ್ರ ಬೋಟ್ ಕ್ಲಿನಿಕ್‌ಗಳನ್ನು ಬಳಸಲಾಗುತ್ತಿದೆ. ಈಗ ಸ್ಥಳೀಯವಾಗಿ ಈ ಬೋಟ್ ಕ್ಲಿನಿಕ್‌ಗಳು ಜನಪ್ರಿಯಗೊಳ್ಳುತ್ತಿವೆ ಎಂದರು.
ಒರಿಸ್ಸಾದ ಕರುಣಾಕರ ಬೆಹ್ರಾ, ಅಸ್ಸಾಂನ ಜೋಯ್‌ಸಿಂಗ್ ಟೆರೋನ್, ಮೇಘಾಲಯದ ಮೋನಿಕಾ ಸಿ.ವಾಲಿಂಗ್ ತಮ್ಮ ತಮ್ಮ ರಾಜ್ಯಗಳಲ್ಲಿ ತಾವು ನಡೆಸಿದ ಕ್ಷೇತ್ರ ಕಾರ್ಯಗಳಲ್ಲಿ ಎದುರಾದ ಸಮಸ್ಯೆಗಳ ಕುರಿತು, ಅನುಭವಗಳನ್ನು ಸೆಲ್ಕೋದ ಅಧಿಕಾರಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸೆಲ್ಕೋದ ಡಿಜಿಎಂ ಜಗದೀಶ್ ಪೈ, ಹಿರಿಯ ವ್ಯವಸ್ಥಾಪಕ ಜೋಬಿ, ಎಜಿಎಂ ಗುರುಪ್ರಸಾದ್ ಉಪಸ್ಥಿತರಿದ್ದರು. ಸುಧೀರ್ ಕುಲಕರ್ಣಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಂ.ಸ್ವಾತಿ ವಂದಿಸಿದರು.







