ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ಜೆ.ಜಾರ್ಜ್ ಚಾಲನೆ

ಬೆಂಗಳೂರು, ಮೇ 14: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಕೆ.ನಗರ ವಾರ್ಡ್‌ನಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ರವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್ ಅವರು, ನಮ್ಮ ಸರಕಾರವು ನುಡಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಜನತೆಗೆ ಸೌಲಭ್ಯವನ್ನು ಒದಗಿಸುತ್ತಿದೆ. ಅಲ್ಲದೆ, ಯಾವುದೇ ಅಭಿವೃದ್ಧಿ ಯೋಜನೆ ಕೈಗೊಂಡರೂ ಯಾವುದಾದರೊಂದು ಆರೋಪ ಮಾಡಿ ಯೋಜನೆಯ ಅಭಿವೃದ್ಧಿಗೆ ತಡೆಯೊಡ್ಡಲು ಪ್ರಯತ್ನಿಸುತ್ತಾರೆ. ಅದರೆ ಸರಕಾರವು ಜನರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತರ ನೀಡುತ್ತಿದೆ ಎಂದು ತಿಳಿಸದರು.
ಮೇಯರ್ ಜಿ.ಪದ್ಮಾವತಿ ಮಾತನಾಡಿ, ಯಶವಂತಪುರ ವಾರ್ಡ್‌ನ ಬಿ.ಕೆ ನಗರ ನಿವಾಸಿಗಳಿಗೆ ಈ ದಿನ ಸುದಿನವಾಗಿದ್ದು, 425 ವಸತಿ ನಿರ್ಮಾಣವನ್ನು 16.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿಕೊಡಲು ಶಂಕುಸ್ಥಾಪನೆ ನೆರವೇರಿಸಿರುವುದಕ್ಕೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಇದರಿಂದ ಈ ಭಾಗದಲ್ಲಿ ಸುಮಾರು 40-50 ವರ್ಷಗಳಿಂದ ನೆಲಿಸಿದ ಜನರಿಗೆ ಶಾಸ್ವತವಾದ ಪರಿಹಾರ ನೀಡಿದಂತಾಗಿದೆ ಎಂದು ತಿಳಿಸದರು.
ಸಂಸದ ಡಿ.ಕೆ ಸುರೇಶ್ ಮಾತನಾಡಿ, ಈ ಪ್ರದೇಶದಲ್ಲಿ ಸುಮಾರು ಬಾರಿ ತಪಾಸಣೆ ನಡೆಸಿ ಆಗಬೇಕಾದ ಕಾರ್ಯಗಳಿಗೆ ಯೋಜನಾ ಬದ್ದವಾಗಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮೋದನೆ ಪಡೆದು ಇದೀಗ ಶಾಶ್ವತವಾದ ಪರಿಹಾರವನ್ನು ನೀಡಲು ಸಾಧ್ಯವಾಗಿದ್ದು, 2 ಬಿಎಚ್‌ಕೆ ವುಳ್ಳ ವಸತಿ ಸಂಕೀರ್ಣವಾಗಿದ್ದು, ರಾಜ್ಯದಲ್ಲೇ ಅತಿ ಅಧಿಕವಾದ ಅನುದಾನವನ್ನು ಪಡೆಯುವಲ್ಲಿ ಶಾಸಕರು ಯಶಸ್ವಿಯಾಗಿದ್ದು, ಅದರಂತೆ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಅದೇ ರೀತಿ ಯಸವಂತಪುರ ವಾರ್ಡ್‌ನಲ್ಲಿ ಅನೇಕ ನೂತನ ಯೋಜನೆಗಳು ಜಾರಿಗೊಂಡಿವೆ. ಕುಡಿಯುವ ನೀರಿನ ವ್ಯವಸ್ಥೆಗೆ 2 ಕೊಳವೆಗಳನ್ನು ಪ್ರತಿ ಮನೆಗೆ ಒದಗಿಸಲಾಗಿದೆ. ಕುಡಿಯುವುದಕ್ಕೆ ಕಾವೇರಿ ನೀರಿನ ಸರಬರಾಜು, ಇತರೆ ಉಪ ಯೋಜನೆ ಬೋರ್ ವೆಲ್ ನೀರು ಸರಬರಾಜು ಮಾಡಿ ಯಶಸ್ವಿಯಾಗಿ ಇದೇ ಮಾದರಿ ಇತರೇ 4 ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸದರು.
ಶಾಸಕ ಮುನಿರತ್ನ ಮಾತನಾಡಿ, ನಾನು ಈ ಭಾಗದ ಜನರಿಗೆ ವಾಗ್ದಾನ ನೀಡಿದಂತೆ ಪ್ರತಿ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಡಲು ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಲ್ಲದೆ, ಸರಕಾರದ ವತಿಯಿಂದ ನಿಮಗೆ ಸುಸರ್ಜಿತವಾದ ಮನೆ ನಿರ್ಮಿಸಿ ಸ್ಲಮ್ ಎಂಬ ಪದವನ್ನು ತೆಗೆದು ಹಾಕಿ ಈ ಪ್ರದೇಶವನ್ನು ಉನ್ನತ ಮಟ್ಟದ ಪ್ರದೇಶವನ್ನಾಗಿಸುವುದು ನನ್ನ ಗುರಿ. ಅದೇ ರೀತಿ ಬಿಬಿಎಂಪಿಯ ಆಸ್ಪತ್ರೆಯನ್ನೂ ಉನ್ನತೀಕರಿಸಿ ಬರುವ ತಿಂಗಳಿನಲ್ಲಿ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಹಾಗೂ ನನ್ನ ಕ್ಷೇತ್ರದಲ್ಲಿ ಶೇಖಡವಾರು ಪ್ರಗತಿ ಗಮನಿಸಿದರೆ ಡಾಂಬರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಅದೇ ರೀತಿ ಎಲ್ಲ ವಾರ್ಡ್‌ಗಳಲ್ಲಿ ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.







