ಸಾಗರ: ‘ಗುರು-ನೆನಪು ಕಾರ್ಯಕ್ರಮ
.jpg)
ಸಾಗರ, ಮೇ 14: ಬೆರಳೆಣಿಕೆಯಷ್ಟು ಜನರು ತಮ್ಮ ಕ್ರಿಯಾಶೀಲತೆ, ಬುದ್ದಿವಂತಿಕೆ ಮತ್ತು ಜಾಣ್ಮೆಯ ಮೂಲಕ ನಮ್ಮನ್ನು ಯಾವತ್ತೂ ಎಚ್ಚರಗೊಳಿಸುತ್ತಾರೆ. ಅಂತಹವರ ಪೈಕಿ ಡಾ. ಗುರುರಾವ್ ಬಾಪಟ್ ಸಹ ಒಬ್ಬರು. ಡಾ. ಗುರುರಾವ್ ಬಾಪಟ್ ನಮ್ಮನ್ನಗಲಿ ಒಂದು ವರ್ಷವಾಯಿತು. ಆದರೆ ಅವರು ಸೃಷ್ಟಿಸಿ ಹೋದ ಶೂನ್ಯದಿಂದ ನಾವೆಲ್ಲ ಏನು ಕಳೆದುಕೊಂಡಿದ್ದೇವೆ ಎನ್ನುವುದು ನಮಗೆ ಅರ್ಥವಾಗುತ್ತಿದೆ ಎಂದು ಸಾಹಿತಿ ಡಾ. ಡಿಸೋಜ ತಿಳಿಸಿದರು.
ಇಲ್ಲಿನ ಅಜಿತ ಸಭಾಭವನದಲ್ಲಿ ನಮ್ಮ ರಂಗಸ್ವರೂಪ ಮತ್ತು ಡಾ. ಗುರುರಾವ್ ಬಾಪಟ್ ಸಂಸ್ಮರಣಾ ಸಮಿತಿ ಇವರ ಆಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ‘ಗುರು-ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಾಪಟ್ ಅವರು ವೈಯಕ್ತಿಕ ಬದುಕನ್ನು ಸಂಪದಗೊಳಿಸಿಕೊಳ್ಳುತ್ತಲೇ ಸಮಾಜಮುಖಿಯಾಗಿ ಬೆಳೆದು ನಿಂತವರು. ತಮ್ಮ ಬುದ್ದಿವಂತಿಕೆ, ಕ್ರಿಯಾಶೀಲತೆ ಹಾಗೂ ಜಾಣ್ಮೆ ಬಳಸಿಕೊಳ್ಳುವ ಮೂಲಕ ಸಮಾಜದ ಸೂಕ್ಷ್ಮ ದೃಷ್ಟಿಗೆ ತೆರೆದುಕೊಂಡವರು. ದೊಡ್ಡಸ್ತಿಕೆ, ಹಿರಿಮೆ ಗರಿಮೆ, ಆಡಂಬರವನ್ನು ಮೀರಿ ನಿಂತ ವ್ಯಕ್ತಿತ್ವ ಬಾಪಟ್ ಅವರದ್ದಾಗಿತ್ತು.
ಡಾ. ಗುರುರಾವ್ ಬಾಪಟ್ ಸೂರ್ಯಕಾಂತಿ ಹೂವಿನಂತೆ ಆಗದೆ, ಕತ್ತಲಿನಲ್ಲಿಯೂ ಸುತ್ತಲೂ ಪರಿಮಳ ಪಸರಿಸುವ ರಾತ್ರಿರಾಣಿ ಹೂವಿನಂತೆ ಕಂಗೊಳಿಸಿದವರು ಎಂದು ತಿಳಿಸಿದರು.
ಡಾ. ಗುರುರಾವ್ ಬಾಪಟ್ ಅವರದ್ದು ಬಹುಮುಖ ಪ್ರತಿಭೆ. ಮತ್ತೊಬ್ಬರನ್ನು ಪ್ರಭಾವಿಸುವ ವಿಶೇಷ ಗುಣ ಅವರಲ್ಲಿತ್ತು. ಇಂಗ್ಲೀಷ್ ಪ್ರಾಧ್ಯಾಪಕರಾಗಿ, ನಾಟಕಕಾರರಾಗಿ, ಯಕ್ಷಗಾನ ವಿಮರ್ಶಕರಾಗಿ, ನಟರಾಗಿ, ಲೇಖಕರಾಗಿ ಅನೇಕ ರೀತಿಯಲ್ಲಿ ಬಾಪಟ್ ಅವರು ಸಮಾಜಕ್ಕೆ ಸಂದವರು. ಅವರ ಜೀವನ ಸಾಧನೆಗಳನ್ನು ಚಿಂತನಮಂಥನ ಮಾಡುವ ನಿಟ್ಟಿನಲ್ಲಿ ಹಮ್ಮಿಕೊಂಡ ಗುರುನೆನಪು ಕಾರ್ಯಕ್ರಮ ಬಾಪಟ್ ಅವರ ವ್ಯಕ್ತಿತ್ವ ತೆರೆದಿಡುವಲ್ಲಿ ಯಶಸ್ವಿಯಾಗಲಿದೆ ಎಂದರು.
ಜೋಷಿ ಫೌಂಡೇಶನ್‌ನ ಅಬಸೆ ದಿನೇಶಕುಮಾರ್ ಜೋಷಿ ಮಾತನಾಡಿ, ಇಂಗ್ಲೀಷ್ ಉಪನ್ಯಾಸಕರಾಗಿದ್ದ ಅಕ್ಷರ ಕಲಿಸುವ ಗುರುಗಳು ಮಾತ್ರವಲ್ಲದೆ, ಸಮಾಜದಲ್ಲಿ ಸನ್ಮಾರ್ಗದಿಂದ ನಡೆಯಲು ಮಾರ್ಗದರ್ಶನ ಮಾಡಿದವರು ಸಹ ಗುರುಗಳಾಗಿರುತ್ತಾರೆ. ಅಂತಹವರ ಸಾಲಿನಲ್ಲಿ ಬಾಪಟ್ ಅವರು ಅಗ್ರಗಣ್ಯರು. ಡಾ. ಗುರುರಾವ್ ಬಾಪಟ್ ಅತ್ಯಂತ ಸರಳ ಹಾಗೂ ಸಜ್ಜನಿಕೆಯಿಂದ ಬದುಕಿದವರು. ಬೇರೆಬೇರೆ ರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಬಾಪಟ್ ಅವರದ್ದು ಯಾರೂ ಮರೆಯದ ವ್ಯಕ್ತಿತ್ವ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ, ಬಾಪಟ್ ಅವರದ್ದು ಆದರ್ಶ ವ್ಯಕ್ತಿತ್ವ. ಎಲ್ಲರನ್ನೂ ತಮ್ಮತ್ತ ಸೆಳೆಯುವ ಸ್ವಭಾವ ಹೊಂದಿದ್ದವರು. ಸಾಕಷ್ಟು ಶಿಷ್ಯ ಸಮೂಹವನ್ನು ಗಳಿಸಿಕೊಂಡಿದ್ದ ಬಾಪಟ್ ಅವರು ಸಾಗರದ ಸಾಂಸ್ಕೃತಿಕ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಉಳಿಯುತ್ತಾರೆ ಎಂದರು.
ವೇದಿಕೆಯಲ್ಲಿ ಮಾಧುರಿ ಬಾಪಟ್, ರಂಗಕರ್ಮಿ ಆರ್.ಎಂ.ಬಾಪಟ್ ಹಾಜರಿದ್ದರು. ನಂತರ ‘ಬಾಪಟ್ ಅವರ ಸಾಂಸ್ಕೃತಿಕ ವಿಮರ್ಶಾತ್ಮಕ ಬರಹಗಳು ವಿಷಯ ಕುರಿತು ಡಾ. ಮೋಹನ್ ಚಂದ್ರಗುತ್ತಿ ಮಾತನಾಡಿದರು.
ರಂಗಕರ್ಮಿಗಳಾದ ಪ್ರತಿಭಾ ಎಂ.ವಿ. ಹಾಗೂ ಶಿವಾನಂದ ಕುಗ್ವೆ ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನ ರಂಗತಜ್ಞ ಗಜಾನನ ಶರ್ಮ ಅಧ್ಯಕ್ಷತೆ ವಹಿಸಿದ್ದರು. ನಂತರ ‘ಬಾಪಟ್ ಅವರ ಬಹುಮುಖಿ ಆಸಕ್ತಿಗಳು ವಿಷಯ ಕುರಿತು ಬರಹಗಾರ ವಿಲಿಯಂ ಮಾತನಾಡಿದರು. ರಂಗ ನಿರ್ದೇಶಕ ಇಕ್ಬಾಲ್ ಅಹ್ಮದ್ ಶಿಕಾರಿಪುರ, ಪತ್ರಕರ್ತ ಎಂ.ರಾಘವೇಂದ್ರ ಪ್ರತಿಕ್ರಿಯೆ ನೀಡಿದರು. ನಂತರ ನಾಗೇಂದ್ರ ಕುಮಟಾ ಮತ್ತು ಸಂಗಡಿಗರಿಂದ ರಂಗಗೀತೆಗಳು ಮತ್ತು ರಂಗದೃಶ್ಯಗಳು ನಡೆಯಿತು.







