ಸಾರ್ವಜನಿಕ ರಂಗದ ಉದ್ದಿಮೆ ನಿರ್ನಾಮಕ್ಕೆ ಸರಕಾರ ಸಂಚು: ಅಮಾನುಲ್ಲಾ ಖಾನ್

ಉಡುಪಿ, ಮೇ 14: ಉಡುಪಿಯ ಬಾಸೆಲ್ ಮಿಷನರೀಸ್ ಮೆಮೋರಿ ಯಲ್ ಆಡಿಟೋರಿಯಂನಲ್ಲಿ ನ.18 ರಿಂದ 21ರವೆರೆಗೆ ನಡೆಯಲಿರುವ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 11ನೆ ಮಹಾಅಧಿವೇಶನದ ಸ್ವಾಗತ ಸಮಿತಿ ರಚನೆ ಮತ್ತು ಸಮಾಲೋಚನಾ ಸಭೆಯು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಶನಿವಾರ ಜರಗಿತು.
ಮುಖ್ಯ ಅತಿಥಿಯಾಗಿ ಅಖಿಲ ಭಾರತ ವಿಮಾ ನೌಕರರ ಸಂಘದ ಅಧ್ಯಕ್ಷ ಅಮಾನುಲ್ಲಾ ಖಾನ್ ಮಾತನಾಡಿ, ನವ ಉದಾರೀಕರಣದ ಭಾಗವಾಗಿ ಸಾರ್ವ ಜನಿಕ ರಂಗದ ಉದ್ದಿಮೆಗಳನ್ನು ಸರಕಾರ ವ್ಯವಸ್ಥಿತವಾಗಿ ನಿರ್ನಾಮಗೊಳಿಸಲು ಉದ್ದೇಶಿಸಿರುವ ಈ ಕಾಲಘಟ್ಟದಲ್ಲಿ ಈ ಉದ್ದಿಮೆಗಳನ್ನು ರಕ್ಷಿಸುವ ಮತ್ತು ಜನತೆಯ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಯಲ್ಲಿ ಇಂತಹ ಸಮಾವೇಶಗಳು ಪ್ರಸ್ತುತ ಎಂದರು.
ದೇಶದ ಶೇ. ಒಂದರಷ್ಟಿರುವ ಶ್ರೀಮಂತ ಜನತೆಯು ಶೇ.60ರಷ್ಟು ದೇಶದ ಸಂಪತ್ತನ್ನು ನಿಯಂತ್ರಿಸುತ್ತಿರುವ ಸಂದರ್ಭದಲ್ಲಿ ದೇಶದ ಅಭಿವೃದ್ಧಿಯ ಫಲವನ್ನು ದೇಶದ ಸಮಸ್ತ ಜನರಿಗೆ ಸರಿಸಮಾನವಾಗಿ ಹಂಚುವ ಸಮಾಜ ವ್ಯವಸ್ಥೆಯ ನಿರ್ಮಾಣಕ್ಕೆ ಸಮಾವೇಶವು ತೆಗೆದುಕೊಳ್ಳುವ ನಿರ್ಣಯಗಳು ನಾಂದಿಯಾಗಲಿ ಎಂದು ಅವರು ಹಾರೈಸಿದರು.
ದಕ್ಷಿಣ ಮಧ್ಯ ವಿಮಾ ನೌಕರರ ಒಕ್ಕೂಟದ ಜತೆ ಕಾರ್ಯದರ್ಶಿ ಜೆ.ಸುರೇಶ್ ಮಾತನಾಡಿ, ಸರಕಾರದ ನವ ಉದಾರೀಕರಣ ನೀತಿಗಳು ಮತ್ತು ಕಾರ್ಮಿಕ ಹಕ್ಕುಗಳ ಮೇಲಿನ ಪ್ರಹಾರಗಳ ವಿರುದ್ಧ ಕಾರ್ಮಿಕ ಸಂಘಗಳು ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಸುರತ್ಕಲ್ ಎನ್‌ಐಟಿಕೆಯ ಪ್ರಾಧ್ಯಾಪಕ ಕೆ.ರಾಜೇಂದ್ರ ಉಡುಪ ಮಾತ ನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಕಾರ್ಮಿಕ ವರ್ಗಗಳ ಮುಂದಿರುವ ಸವಾಲುಗಳು ಹಾಗೂ ಹೆಚ್ಚುತ್ತಿರುವ ರೋಬೋಟಿಕ್ ತಂತ್ರಜ್ಞಾನದ ಪರಿಣಾಮ ಕಾರ್ಮಿಕ ವರ್ಗದ ಅಸ್ತಿತ್ವ ಇಂದು ಕವಲು ಹಾದಿಯಲ್ಲಿದೆ. ಈ ಎಲ್ಲಾ ತಂತ್ರಜ್ಞಾನದ ಅಳವಡಿಕೆಯ ವಿರುದ್ಧ ಕಾರ್ಮಿಕ ವರ್ಗಗಳ ಐಕ್ಯ ಹೋರಾಟ ಅನಿವಾರ್ಯ ಎಂದು ಹೇಳಿದರು.
ಸುರತ್ಕಲ್ ಎನ್‌ಐಟಿಕೆಯ ಪ್ರಾಧ್ಯಾಪಕ ಕೆ.ರಾಜೇಂದ್ರ ಉಡುಪ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಉಡುಪಿ ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ರೈ ಮತ್ತು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರನ್ನು ಉಪಾಧ್ಯಕ್ಷರಾಗಿ, ವಿಮಾ ನೌಕರರ ಸಂಘ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಯು.ಗುರುದತ್ ಅವರನ್ನು ಸಂಚಾಲಕ ರಾಗಿ, ಉಡುಪಿ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಪಾದ ಹೇರ್ಳೆ ಅವರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿಯ ಸದಸ್ಯರಾಗಿ ಆರ್.ಎಂ.ಸಾಮಗ, ನಂದಕೃಷ್ಣ, ರಮೇಶ್ ಕುಮಾರ್, ಶೇಖರ್ ಬಿ.ಪೂಜಾರಿ, ಮಾಧವಿ ಭಂಡಾರಿ, ಸುಮಾ ಎಸ್., ಕೆ. ಫಣಿರಾಜ್, ಜಿ.ರಾಜಶೇಖರ್, ಹಯವದನ ಮೂಡುಸಗ್ರಿ, ಕೆ.ಶಂಕರ್, ಕೆ.ವಿ. ಭಟ್, ಹೆರಾಲ್ಡ್ ಡಿಸೋಜ, ರವೀಂದ್ರ, ಶಶಿಧರ ಗೊಲ್ಲ, ಎಚ್.ವಿಠಲ ಪೂಜಾರಿ. ನಾಗರತ್ನ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ. ವಿಶ್ವನಾಥ ವಹಿಸಿದ್ದರು. ಯು.ಗುರುದತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಡೆರಿಕ್ ಎ.ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.







