ದಿಲ್ಲಿಯಲ್ಲಿ ಸಿಕ್ಕಿಂ ಯುವತಿಯನ್ನು ಅಪಹರಿಸಿ ಅತ್ಯಾಚಾರ

ಗುರ್ಗಾಂವ್, ಮೇ15: ಸಿಕ್ಕಿಂನ ಇಪ್ಪತ್ತೆರಡರ ಹರೆಯದ ಯುವತಿಯನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾದ ಘಟನೆ ಹರ್ಯಾಣದಲ್ಲಿ ರವಿವಾರ ನಡೆದಿದೆ.
ದಿಲ್ಲಿಯಲ್ಲಿ ನಿರ್ಭಯ ಪ್ರಕರಣದಲ್ಲಿ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲಿ ಶಿಕ್ಷೆ ವಿಧಿಸಿ ಒಂದು ವಾರ ಕಳೆಯುವಷ್ಟರಲ್ಲಿ ಹರ್ಯಾಣದ ರೋಹ್ಟಕ್ ನಲ್ಲಿ ಇನ್ನೊಂದು ನಿರ್ಭಯ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಅದೇ ಪ್ರಕರಣಕ್ಕೆ ಮತ್ತೊಂದು ಅತ್ಯಾಚಾರ ಪ್ರಕರಣ ಸೇರ್ಪಡೆಯಾಗಿದೆ.
ರೋಹ್ಟಕ್ ನಲ್ಲಿ 23ರ ಹರೆಯದ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದರು. ಅಷ್ಟು ಮಾತ್ರವಲ್ಲದೆ ಆಕೆಯ ಖಾಸಗಿ ಭಾಗಗಳನ್ನು ಚೂಪಾದ ಆಯುಧಗಳಿಂದ ಕತ್ತರಿಸಿ ಹಾಕಿದ್ದರು.. ಎಲ್ಲವೂ ಮುಗಿದ ಬಳಿಕ ಮಹಿಳೆಯ ಗುರುತು ಸಿಗದಂತೆ ಮಾಡಲು ಆಕೆಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದರು.
ಇದೀಗ ಸೇರ್ಪಡೆಗೊಂಡ ಹೊಸ ಪ್ರಕರಣದಲ್ಲಿ ದಿಲ್ಲಿಯಿಂದ ಗುರ್ಗಾಂವ್ ನ ಸೆಕ್ಟರ್ 17ರಲ್ಲಿರುವ ತನ್ನ ಮನೆ ವಾಪಸಾಗುತ್ತಿದ್ದ ಸಿಕ್ಕಿಂನ ಯುವತಿಯನ್ನು ಮಧ್ಯಾಹ್ನ 2:30ರ ಹೊತ್ತಿಗೆ ಮೂವರ ದುಷ್ಕರ್ಮಿಗಳ ತಂಡ ಅಪಹರಿಸಿ ನಜಾಫ್‌ಘಡಕ್ಕೆ ಕಾರಿನಲ್ಲಿ ಕೊಂಡೊಯ್ದು ಆಕೆಯ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಆಕೆಯನ್ನು ರಸ್ತೆ ಬದಿಗೆ ಕಾರಿನಿಂದ ದೂಡಿ ಹಾಕಿ ಪರಾರಿಯಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂತೃಸ್ತೆ ನೀಡಿದ ದೂರಿನಂತೆ ದಿಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ದುಷ್ಕರ್ಮಿಗಳ ಪೈಕಿ ಓರ್ವನ ಹೆಸರು ಗೊತ್ತಾಗಿದ್ದು, ಆತನ ಹೆಸರು ದೀಪಕ್ ಎಂದು ತಿಳಿದು ಬಂದಿದೆ.