ಹೊಸ ಸೈಬರ್ ಅಪಾಯ ' ರಾನ್ಸಮ್ ವೇರ್ '
ಏನಿದು ? ಇಲ್ಲಿದೆ ಮಾಹಿತಿ
ಹೊಸದಿಲ್ಲಿ,ಮೇ 15 : ರಾನ್ಸಮ್ ವೇರ್ ಎಂಬ ದುರುದ್ದೇಶಪೂರಿತ ಸಾಫ್ಟ್ ವೇರ್ ವಿಶ್ವದಾದ್ಯಂತ ಹಲವಾರು ಕಂಪೆನಿಗಳಿಗೆ ತೊಂದರೆಯಂಟು ಮಾಡಿದೆಯಲ್ಲದೆ ಸಾವಿರಾರು ಕಂಪ್ಯೂಟರುಗಳು ಬಾಧಿತವಾಗಿವೆ. ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ಹಾಗೂ ಜನರು ಅದಕ್ಕೆ ಹೇಗೆ ಬಲಿ ಬೀಳುತ್ತಾರೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ವಾನ್ನಕ್ರೈ ಎಂದರೇನು ?
ವಾನಾಕ್ರಿಪ್ಟ್0ಆರ್ 2.0, ವಾನ್ನಕ್ರೈ ಅಥವಾ ಡಬ್ಲ್ಯುಕ್ರೈ ಎಂಬುದು ಒಂದು ವಿಧದ ರಾನ್ಸಮ್ ವೇರ್ ಆಗಿದ್ದು ನಿಮ್ಮ ಕಂಪ್ಯೂಟರಿನ ಫೈಲ್ ಗಳನ್ನು ಲಾಕ್ ಮಾಡಿ ಎನ್ಕ್ರಿಪ್ಟ್ ಮಾಡುವುದರಿಂದ ನೀವು ಮತ್ತೆ ಆ ಫೈಲ್ ಉಪಯೋಗಿಸುವುದು ಅಸಾಧ್ಯವಾಗುತ್ತದೆ.
ತಪ್ಪಾದುದನ್ನು ಕ್ಲಿಕ್ ಮಾಡಿ ಅಥವಾ ತಪ್ಪಾದುದನ್ನು ಡೌನ್ ಲೋಡ್ ಮಾಡಿದಾಗ ನಿಮ್ಮ ಕಂಪ್ಯೂಟರ್ ಪ್ರವೇಶಿಸುವ ಈ ರ್ಯಾನ್ಸಮ್ ವೇರ್ ನಿಮಗೆ ಬೇಕಿದ್ದುದನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.
ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ?
ಈ ವಾನ್ನಾಕ್ರೈ ಪ್ರೊಗ್ರಾಂ ನಿಮ್ಮ ಫೈಲ್ ಗಳನ್ನು ಎನ್ಕ್ರಿಪ್ಟ್ ಮಾಡಿ ನಿಮಗೆ ಆ ಫೈಲ್ ಮತ್ತೆ ಬೇಕಿದ್ದರೆ ಬಿಟ್ ಕಾಯಿನ್ ಮುಖಾಂತರ ಹಣ ಪಾವತಿಗೆ ಬೇಡಿಕೆ ಸಲ್ಲಿಸಬೇಕೆಂದು ಹೇಳುತ್ತದೆ. ಹಣ ಪಾವತಿಯ ನಂತರವೂ ಬಳಕೆದಾರರೊಬ್ಬರಿಗೆ ಅವರ ಎನ್ಕ್ರಿಪ್ಟ್ ಮಾಡಲಾದ ಫೈಲ್ ಮತ್ತೆ ದೊರೆಯುವುದೆಂಬ ಖಾತರಿಯೇನಿಲ್ಲ. ಕೆಲ ರಾನ್ಸಮ್ ವೇರ್ ಗಳಂತೂ ಫೈಲ್ ಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಕೆಲ ದಿನಗಳ ನಂತರ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಡುತ್ತವೆಯಲ್ಲದೆ ಆ ಫೈಲ್ ಗಳನ್ನು ಡಿಲೀಟ್ ಮಾಡುವ ಬೆದರಿಕೆಯನ್ನೂ ಒಡ್ಡುತ್ತವೆ.
ಕೆಲ ರಾನ್ಸಮ್ ವೇರ್ ಪ್ರೋಗ್ರಾಂಗಳು ಕಂಪ್ಯೂಟರನ್ನು ಸಂಪೂರ್ಣವಾಗಿ ಲಾಕ್ ಮಾಡಿಬಿಟ್ಟರೆ ಇನ್ನು ಕೆಲವು ಹಣ ಪಾವತಿ ಮಾಡಬೇಕೆನ್ನುವ ಮೆಸೇಜ್ ತೋರಿಸುತ್ತವೆ. ಮತ್ತೂ ಕೆಲವು ಮುಚ್ಚಲು ಸಾಧ್ಯವಾಗದಂತಹ ಪಾಪ್ ಅಪ್ ಗಳನ್ನು ಕಂಪ್ಯೂಟರ್ ಸ್ಕ್ರೀನುಗಳಲ್ಲಿ ಮೂಡಿಸುತ್ತವೆ.
ಈ ರಾನ್ಸಮ್ ವೇರ್ ಹಲವು ದೇಶಗಳಲ್ಲಿ ಹರಡಿದ್ದು ಆರಂಭಿಕ ವರದಿಗಳ ಪ್ರಕಾರ ಕನಿಷ್ಠ ಎರಡು ಡಜನ್ ದೇಶಗಳು ಬಾಧಿತವಾಗಿವೆ. ಎಂಟು ಏಷ್ಯನ್ ದೇಶಗಳು, ಎಂಟು ಯುರೋಪಿಯನ್ ದೇಶಗಳು, ಟರ್ಕಿ, ಆರ್ಜೆಂಟಿನಾ ಹಾಗೂ ಯುಎಇ ಕೂಡ ಈ ರಾನ್ಸಮ್ ವೇರ್ ನಿಂದ ತೊಂದರೆಗೊಳಗಾಗಿವೆ.
ರಾನ್ಸಮ್ ವೇರ್ ಕೇವಲ ಒಂದು ಪ್ರೊಗ್ರಾಂ ಆಗಿರದೆ ಒಂದು ಹುಳದಂತಿದ್ದು ಒಂದು ಕಂಪ್ಯೂಟರ್ ಪ್ರವೇಶಿಸಿದ ನಂತರ ಸಾಧ್ಯವಾದಷ್ಟು ಇತರ ಕಂಪ್ಯೂಟರುಗಳಿಗೆ ಹರಡಲು ಯತ್ನಿಸುತ್ತದೆ.
ಇದರ ಹಿಂದೆ ಯಾರಿದ್ದಾರೆ ?
ಶ್ಯಾಡೋ ಬ್ರೋಕರ್ಸ್ ಎಂಬ ಗುಂಪು ಈ ರಾನ್ಸಮ್ ವೇರ್ ಹಿಂದೆ ಇದೆಯೆನ್ನಲಾಗಿದೆ. ಈ ಹ್ಯಾಕಿಂಗ್ ಸಾಧನವನ್ನು ಅದು ಎನ್‌ಎಸ್‌ಎ ರಹಸ್ಯ ಸರ್ವರ್ ನಿಂದ ಪಡೆದಿದೆಯೆಂದು ಹೇಳಿಕೊಂಡಿದೆ.
2016ರಲ್ಲಿ ಮೊದಲು ಕಾಣಿಸಿಕೊಂಡ ಈ ಹ್ಯಾಕರ್ಸ್ ಗುಂಪಿಗೆ ರಷ್ಯಾ ಸರಕಾರದೊಂದಿಗೆ ನಂಟು ಇದೆಯೆಂದೂ ಹೇಳಲಾಗುತ್ತಿದೆ.