ಕಾವೇರಿದ ಯುವ ಕಾಂಗ್ರೆಸ್ ಚುನಾವಣಾ ಕಣ: ಮಿಥುನ್ ರೈ-ಲುಕ್ಮಾನ್ ಬೆಂಬಲಿಗರ ನಡುವೆ ಹೊಡೆದಾಟ

ಬಂಟ್ವಾಳ, ಮೇ 15: ಯುವ ಕಾಂಗ್ರೆಸ್ ಚುನಾವಣಾ ಬೂತ್ ನಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಬಂಟ್ವಾಳ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದೆ.
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಿಥುನ್ ರೈ ಹಾಗೂ ಲುಕ್ಮಾನ್ ಅವರ ಬೆಂಬಲಿಗರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ. ಚುನಾವಣಾ ಆರಂಭದ ಬಳಿಕ ಪದೇ ಪದೇ ನಡೆಯುತ್ತಿರುವ ಈ ಹೊಡೆದಾಟದಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರಾದರೂ ಪಕ್ಷದೊಳಗಿನ ಹೊಡೆದಾಟವಾದುದರಿಂದ ಮೂಕಪ್ರೇಕ್ಷಕರಾಗಿ ನಿಲ್ಲುವಂತಾಗಿದೆ. ಚುನಾವಣೆ ಆರಂಭವಾದಾಗಿನಿಂದಲೂ ಸಣ್ಣ ಪುಟ್ಟ ವಿಚಾರಗಳಿಗೆ ಸಂಬಂಧಿಸಿ ಆಗಾಗ ಕಾರ್ಯಕರ್ತರು ಹೊಡೆದಾಟ ನಡೆಸುತ್ತಿದ್ದಾರೆ.
Next Story